ಬೆಂಗಳೂರು : ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪೀಡಿತ ಕಾವಲ್ ಭೈರಸಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ನಿವಾಸದ ಸಮೀಪದಲ್ಲೇ ಸ್ಥಳೀಯ ಯುವಕರೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದರು. ಈ ಹಿನ್ನೆಲೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಗಲಭೆಯಿಂದಾಗಿ ಕಳೆದ ಒಂದು ವಾರದಿಂದ ಜನ ಹೊರಗೆ ಬರುವುದಕ್ಕೂ ಹೆದರುತ್ತಿದ್ದರು. ಗಣೇಶ ಹಬ್ಬದ ಪ್ರಯುಕ್ತ ಸ್ಥಳೀಯ ಯುವಕರು ಸೇರಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಇದಕ್ಕೆ ಪೊಲೀಸರು ಕೂಡ ಸಾಥ್ ನೀಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಪಕ್ಕದ ಖಾಲಿ ಜಾಗದಲ್ಲಿ ಟೆಂಟ್ ಹಾಕಿ ಗೌರಿ-ಗಣೇಶ ವಿಗ್ರಹ ಇಟ್ಟು ಗಲಭೆ ಪೀಡಿತ ಕಾವಲ್ ಭೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ವಿಶೇಷ ಪೂಜೆ ಮಾಡಲಾಯ್ತು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಚಂದ್ರಶೇಖರ್ ಸಾಥ್ ನೀಡಿದ್ದಾರೆ. 








