ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿಯವರ ತೀವ್ರ ಅನಾರೋಗ್ಯ; ಪ್ರಣಬ್ ದಾ ರಾಜಕೀಯ ಜೀವನದ ಸಿಂಹಾವಲೋಕನ:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಸಂಪೂರ್ಣವಾಗಿ ಕೋಮಾಗೆ ಜಾರಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಅವರಿಗೆ ಮೆದುಳಿನಲ್ಲಿ ದೊಡ್ಡ ಪ್ರಮಾಣದ ರಕ್ತ ಹೆಪ್ಪುಗಟ್ಟುವಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ನಡೆಸಲಾಯಿತು. ಜೊತೆಗೆ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಅವರಿಗೆ ಕೊರೋನಾ ಸೋಂಕು ಕೂಡ ದೃಢಪಟ್ಟಿತ್ತು. ಬಳಿಕ ಅವರ ಆರೋಗ್ಯ ಗಂಭೀರವಾಗಿಯೇ ಮುಂದುವರಿದಿದ್ದು, ಶ್ವಾಸಕೋಶದಲ್ಲೂ ಸೋಂಕು ಕಾಣಿಸಿಕೊಂಡಿದೆ. ಮಾಜಿ ರಾಷ್ಟ್ರಪತಿಗೆ ನವ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ವೆಂಟಿಲೇಟ್ ನೆರವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪ್ರಣಬ್ ಮುಖರ್ಜಿ ಅವರು 2012 ರಿಂದ 2017 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಪ್ರೀತಿಯಿಂದ ಪ್ರಣಬ್ ದಾ ಅಥವಾ ಪುಲ್ಟು ಎಂದು ಕರೆಯಲ್ಪಡುವ ಪ್ರಣಬ್ ಮುಖರ್ಜಿ ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಪ್ರಬಲ ವಾಗ್ಮಿ, ವಿದ್ವಾಂಸ. ಪಶ್ಚಿಮ ಬಂಗಾಳದಿಂದ ಬಂದಿದ್ದರೂ ಕಮ್ಯುನಿಸ್ಟ್ ವಿಚಾರಧಾರೆಯನ್ನು ಹೊಂದಿರದ ರಾಜಕಾರಣಿ. ಅವಕಾಶಕ್ಕಾಗಿ ಪಕ್ಷದ ಸಿದ್ಧಾಂತಗಳನ್ನು, ಸಾಂವಿಧಾನಿಕ ಮೌಲ್ಯಗಳ ಬದ್ಧತೆಯನ್ನು ಎಂದೂ ಬಿಟ್ಟು ಕೊಡದ ಧೀಮಂತ ನಾಯಕ ನೇತಾರ. ಬಹುಮುಖ ಆಸಕ್ತಿಗಳಿರುವ ರಾಜನೀತಿಜ್ಞ.
ಪಶ್ಚಿಮ ಬಂಗಾಳದ ಮೀರತಿಯಲ್ಲಿ 1935ರ ಡಿಸೆಂಬರ್ 11ರಂದು ಜನಿಸಿದ ಮುಖರ್ಜಿ ತಮ್ಮ ವೃತ್ತಿಜೀವನವನ್ನು ಕಲ್ಕತ್ತಾದ ಡೆಪ್ಯೂಟಿ ಅಕೌಂಟೆಂಟ್-ಜನರಲ್ (ಪೋಸ್ಟ್ ಮತ್ತು ಟೆಲಿಗ್ರಾಫ್) ಕಚೇರಿಯಲ್ಲಿ ಉನ್ನತ ವಿಭಾಗದ ಗುಮಾಸ್ತರಾಗಿ ಪ್ರಾರಂಭಿಸಿದರು. 1963 ರಲ್ಲಿ, ಅವರು ಕೋಲ್ಕತ್ತಾದ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದ ಉಪನ್ಯಾಸಕರು (ಸಹಾಯಕ ಪ್ರಾಧ್ಯಾಪಕರು) ಆದರು ನಂತರ ಬಂಗಾಲಿ ಭಾಷೆಯ ಒಂದು ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಬಾಂಗ್ಲಾ ಕಾಂಗ್ರೆಸ್ನಿಂದ 1969ರಲ್ಲಿ ಟಿಕೆಟ್ ಪಡೆದು ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಬಾಂಗ್ಲಾ ಕಾಂಗ್ರೆಸ್, ಕಾಂಗ್ರೆಸ್ ಪಕ್ಷ ದೊಂದಿಗೆ ವಿಲೀನಗೊಂಡ ಬಳಿಕ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಗಮನಸೆಳೆದ ಮುಖರ್ಜಿ ಕಾಂಗ್ರೆಸ್ ಟಿಕೆಟ್ನಲ್ಲಿ 1969 ರಲ್ಲಿ ರಾಜ್ಯಸಭೆ ಮೂಲಕ ಭಾರತೀಯ ಸಂಸತ್ತಿಗೆ ಪ್ರವೇಶಿಸಿದ್ದರು. ಸಕ್ರಿಯ ರಾಜಕಾರಣದಲ್ಲಿ ಅಲ್ಪ ಸಮಯದಲ್ಲಿಯೇ ಇಂದಿರಾ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ 1973 ರಲ್ಲಿ ಅವರ ಸಂಪುಟದಲ್ಲಿ ಸಚಿವರಾದರು. ಮುಂದೆ 1975, 1981, 1993 ಮತ್ತು 1999 ರಲ್ಲಿ ಹಲವು ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು. ತುರ್ತು ಪರಿಸ್ಥಿತಿಯ ವೇಳೆ ಇಂದಿರಾಗೆ ಒತ್ತಾಸೆಯಾಗಿ ನಿಂತಿದ್ದರು.

1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ ಪ್ರಣಬ್ ವಿತ್ತ ಖಾತೆ ಸಚಿವರಾಗಿದ್ದರು. ಆ ಸಂಕೀರ್ಣ ಸನ್ನಿವೇಶದಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಇಂದಿರಾ ಗಾಂಧಿಯ ಹತ್ಯೆಯ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜೀವ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತ್ತು. ಅನುಭವಿ ಮತ್ತು ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ತಮ್ಮನ್ನು ಪಕ್ಷದ ಹಿರಿಯ ಕಿರಿಯ ನಾಯಕರು ಕಡೆಗಣಿಸುತ್ತಿದ್ದಾರೆ ಎಂದು ಅರಿವಾಗಿ ಕಾಂಗ್ರೆಸ್ ನಿಂದ ದೂರ ಸರಿದು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಎಂಬ ನೂತನ ಪಕ್ಷವನ್ನು ರಚಿಸಿದರು.1989ರಲ್ಲಿ ರಾಜೀವ್ ಗಾಂಧಿಯವರ ಕಾರಣದಿಂದ ಮತ್ತೆ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸಿದರು.
ರಾಜೀವ್ ಗಾಂಧಿಯವರ ಹತ್ಯೆಯ ನಂತರ ಪಿ.ವಿ. ನರಸಿಂಹ ರಾವ್ ಅವರಿಗೆ ಯೋಜನಾ ಆಯೋಗ (1991) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (1995) ಜವಾಬ್ದಾರಿಯನ್ನು ಹಸ್ತಾಂತರಿಸಿದರು. ನಂತರ, ಮುಖರ್ಜಿ ಸೋನಿಯಾ ಗಾಂಧಿಯನ್ನು ಬೆಂಬಲಿಸಿ, ಅವರು 1998ರಲ್ಲಿ ಸಕ್ರಿಯ ರಾಜಕಾರಣಿಯಾಗಿ ಕಾಂಗ್ರೆಸ್ಗೆ ಪ್ರವೇಶಿಸಿದಾಗ ಅವರಿಗೆ ಮಾರ್ಗದರ್ಶನ ನೀಡಿದರು. ಪ್ರಣಬ್ ಮುಖರ್ಜಿ ಯುಪಿಎ ಅಧಿಕಾರಕ್ಕೆ ಬಂದಾಗ 2004 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಕೌಶಲ್ಯಪೂರ್ಣ ಆಡಳಿತಗಾರ ಮತ್ತು ಸಕ್ರಿಯ ರಾಜಕಾರಣಿಯಾಗಿ, ಮುಖರ್ಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದರು. ಕಾಂಗ್ರೆಸ್ ಮತ್ತು ಯುಪಿಎ ಆಡಳಿತದ ಅವಧಿಯಲ್ಲಿ ರಕ್ಷಣಾ, ಹಣಕಾಸು, ವಿದೇಶಾಂಗ ವ್ಯವಹಾರಗಳು, ವಾಣಿಜ್ಯ, ಹಡಗು, ಕೈಗಾರಿಕಾ ಮಂತ್ರಿಗಳ ಹುದ್ದೆಗಳನ್ನು ಅಲಂಕರಿಸಿದ ಏಕೈಕ ರಾಜಕಾರಣಿ.
ವಿವಾದಾತ್ಮಕ ಇಂಡೋ-ಯುಎಸ್ ಪರಮಾಣು ಒಪ್ಪಂದ – 123 ಒಪ್ಪಂದದಿಂದ ಹೊರಬರಲು ಮತ್ತು ಪರಮಾಣು ಸರಬರಾಜುದಾರರ ಗುಂಪಿನಿಂದ ಭಾರತಕ್ಕೆ ವಿನಾಯಿತಿ ಗಳಿಸುವಲ್ಲಿ ಪ್ರಣಬ್ ಮುಖರ್ಜಿ ನಿರ್ಣಾಯಕ ಪಾತ್ರ ವಹಿಸಿದ್ದರು. 1984 ರಲ್ಲಿ ಯುರೋ ಮನಿ ನಿಯತಕಾಲಿಕೆಯು ನಡೆಸಿದ ಸಮೀಕ್ಷೆಯಲ್ಲಿ ಪ್ರಣಬ್ ಮುಖರ್ಜಿ ಅವರು ವಿಶ್ವದ ಅತ್ಯುತ್ತಮ ಹಣಕಾಸು ಮಂತ್ರಿ ಎಂದು ವರದಿಮಾಡಿತ್ತು.

ಯುಪಿಎಯ ಎರಡನೇ ಅವಧಿಯಲ್ಲಿ 2012ರಿಂದ 17ರವರೆಗೆ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿ, ವಿವಾದಕ್ಕೆಡೆಯಿಲ್ಲದಂತೆ ಆ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದರು. ಪ್ರಣಬ್ ಮುಖರ್ಜಿ ಪ್ರಧಾನಿ ಪದವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ ಶ್ರೇಷ್ಠ ಮುತ್ಸದ್ಧಿ.

ಅದೆಷ್ಟೋ ದಶಕಗಳಿಂದ ನಿಸ್ವಾರ್ಥವಾಗಿ, ಅವಿಶ್ರಾಂತವಾಗಿ ದೇಶದ ಅಭಿವೃದ್ಧಿಗೆ ದುಡಿದ ಪ್ರಣಬ್ ಮುಖರ್ಜಿ ಎಂಬ ಧೀಮಂತ ನಾಯಕ ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದೇಶ ಕಂಡ ಅಪರೂಪದ ರಾಜಕಾರಣಿ ಪ್ರಣಬ್ ಮುಖರ್ಜಿ ಶೀಘ್ರವೇ ಗುಣಮುಖರಾಗಲಿ ಎಂಬುವುದೇ ನಮ್ಮೆಲ್ಲರ ಅಪೇಕ್ಷೆ .








