ನವದೆಹಲಿ : ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಕಾಂಗ್ರೆಸ್ ನಲ್ಲಿ ವಿರೋಧ ವ್ಯಕ್ತವಾಗಿದ್ದು, ಪಕ್ಷದಲ್ಲಿ ಆಂತರಿಕ ಭಿನ್ನಮತದ ಬಿರುಗಾಳಿ ಎದ್ದಿದೆ. ಇದರ ಬೆನ್ನಲ್ಲೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪಕ್ಷದ ನಾಯಕತ್ವದ ಬದಲಾವಣೆ ಕೋರಿ ಹಾಲಿ ಸಂಸದರು, ಕೇಂದ್ರದ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಎಐಸಿಸಿ ಪದಾಕಾರಿಗಳು ಮತ್ತು ಸಿಡಬ್ಲ್ಯುಸಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್ ನ 23 ಹಿರಿಯ ಮುಖಂಡರು ಪಕ್ಷದ ಸಂಘಟನೆ ಮತ್ತು ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಅವರಿಗೆ ಬರೆದ ಪತ್ರ ಬರೆದಿದ್ದರು.
ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜತೀನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೀಂದರ್ ಕೌರ್ ಭಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚವಾಣ್, ಪಿ.ಜಿ. ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದೌದರಿ, ರಾಜ್ ಬಬ್ಬರ್, ಅರವಿಂದ್ ಸಿಂಗ್, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್ ಕುಲದೀಪ್ ಶರ್ಮಾ, ಯೋಗಾನಂದ ಶಾಸ್ತ್ರಿ ಹಾಗೂ ಸಂದೀಪ್ ದೀಕ್ಷಿತ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.









