ಬೆಂಗಳೂರು: ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೈ ನಾಯಕರ ಆಂತರಿಕ ಜಗಳ ಬಹಿರಂಗವಾಗಿದ್ದು, ರಾಹುಲ್ ಗಾಂಧಿ ಮಾಜಿ ಸಂಸದೆ ರಮ್ಯಾ ಅವರು ಬ್ಯಾಟ್ ಬೀಸಿದ್ದಾರೆ.
ಎಐಸಿಸಿ ಅಧ್ಯಕ್ಷ ನೇಮಕ ವಿಚಾರವಾಗಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ನಾಯಕತ್ವದ ಕುರಿತಾಗಿ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿರುವ ಪತ್ರದ ಕುರಿತಾಗಿ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದು, ಸೋನಿಯಾ ಗಾಂಧಿಗೆ ಪತ್ರ ಬರೆದವರಿಗೆ ಬಿಜೆಪಿ ನಂಟಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಆರೋಪಕ್ಕೆ ಗುಲಾಬ್ ನಬೀ ಆಜಾದ್, ಕಪಿಲ್ ಸಿಬಲ್ ಮುಂತಾದ ಕಾಂಗ್ರೆಸ್ ಹಿರಿಯ ನಾಯಕರು ಕೆಂಡಾಮಂಡಲರಾಗಿದ್ದಾರೆ. ಆರೋಪ ಸಾಬೀತಾದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಲಾಬ್ ನಬೀ ಆಜಾದ್ ಅಸಮಾಧಾನ ಹೊರಹಾಕಿದ್ದರೇ, ಕಪಿಲ್ ಸಿಬಲ್ ಟ್ವಿಟ್ಟರ್ ನಲ್ಲಿ ರಾಹುಲ್ ಗೆ ತಿವಿದಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದು, ‘ರಾಹುಲ್ ಅವರು ತಪ್ಪು ಮಾಡಿದರೆಂದು ನನಗನಿಸುತ್ತದೆ. ಬಿಜೆಪಿ ಮತ್ತು ಮಾಧ್ಯಮದ ಜೊತೆ ಅವರು ಶಾಮೀಲಾಗಿದ್ದಾರೆಂದು ಹೇಳಬೇಕಿತ್ತು’ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಕಪಿಲ್ ಸಿಬಲ್ ಟ್ವೀಟ್ ಉಲ್ಲೇಖಿಸಿ, ಅವರುಗಳು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳಿಗೆ ಲೀಕ್ ಮಾಡಿದ್ದಲ್ಲಾ, ಸಭೆಯಲ್ಲಿ ಚರ್ಚೆಯಾಗುತ್ತಿರುವ ಕ್ಷಣ ಕ್ಷಣದ ವಿಚಾರ/ ಸಂಭಾಷಣೆಯನ್ನೂ ಅವರು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಅದ್ಭುತ ಎಂದು ಟ್ವೀಟ್ ಮಾಡಿದ್ದಾರೆ.









