ಬೆಂಗಳೂರು : ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆಗೆ ಕಾಂಗ್ರೆಸ್ ನ ಒಳ ಜಗಳವೇ ಕಾರಣ ಎಂದು ಎಸ್ ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲಿಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.
ಗಲಭೆ ಸಂಬಂಧ ಎಸ್ ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಇಲಿಯಾಸ್, ‘ಕಾರ್ಪೋರೇಟರ್ ಆರ್. ಸಂಪತ್ ರಾಜ್, ಅವರ ಆಪ್ತ ಸಹಾಯಕ ಅರುಣ್ ಕುಮಾರ್ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಡುವಿನ ರಾಜಕೀಯ ಜಗಳವೇ ಗಲಭೆಗೆ ಕಾರಣ’. ಈ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ ಎಂದು ದೂರಿದರು.
![]()
‘ಗಲಭೆಯಲ್ಲಿ ಎಸ್‍ಡಿಪಿಐ ಪಾತ್ರವಿರುವುದಾಗಿ ಆರೋಪಿಸಲಾಗುತ್ತಿದೆ. ಆದ್ರೆ ಗಲಭೆಗೆ ಕಾರಣವಾದ ನವೀನ್ ಗೆ ವ್ಯಂಗ್ಯಚಿತ್ರ ಕೊಟ್ಟವರು ಯಾರು? ಅದರ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ. ನವೀನ್ ನನ್ನು ಎಲ್ಲಿಂದ ಬಂಧಿಸಲಾಯಿತೆಂದು ಪೆÇಲೀಸರು ಏಕೆ ಹೇಳುತ್ತಿಲ್ಲ’ ಎಂದು ಇಲಿಯಾಸ್ ಪ್ರಶ್ನಿಸಿದ್ದಾರೆ.
ಅಲ್ಲದೆ 13 ಕೊಲೆಗಳ ಆರೋಪ ಹೊರಿಸಿ ಎಸ್‍ಡಿಪಿಐ ನಿಷೇಧಿಸಲು ಹೊರಟಿದ್ದಾರೆ. ನಿಷೇಧ ಏಕೆ ಮಾಡಬೇಕು. ಕಾಂಗ್ರೆಸ್ ಮತ್ತು ಸಂಘ ಪರಿವಾರದವರು ಮಾಡಿರುವ ಕೊಲೆಗಳ ಪಟ್ಟಿ ನಮ್ಮಲ್ಲಿದೆ. ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ದೊಡ್ಡ ಗಾಂಜಾ ದಂಧೆ ಇದೆ. ಇದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ. ಇದರ ಹಿಂದೆ ಯಾರಿದ್ದಾರೆಂದು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿ, ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದೂ ಇಲಿಯಾಸ್ ಆಗ್ರಹಿಸಿದ್ದಾರೆ.









