ಬೆಂಗಳೂರು : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವಿಜಯ್ ಗುರೂಜಿ ಮನವಿ ಮಾಡಿಕೊಂಡಿದ್ದಾರೆ.
ಇಂದು ವಿನಯ್ ಗುರೂಜಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಮನವಿ ಮಾಡಲಾಗಿದೆ. ಕೆಲವೆಡೆ ಪ್ರಾಣಿಗಳ ಹತ್ಯೆ ನಡೆಯುತ್ತಿದೆ. ಅದಕ್ಕಾಗಿ ಈಗ ಗೋಹತ್ಯೆ ನಿಷೇಧ ಅನಿವಾರ್ಯ. ಈ ಸಂಬಂಧ ನಾನು ನೀಡಿದ ಸಲಹೆಗಳನ್ನು ಮುಖ್ಯಮಂತ್ರಿಗಳು ಈವರೆಗೆ ನಿರಾಕರಿಸಿಲ್ಲ. ಈ ಸಲಹೆಯನ್ನೂ ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
![]()
ಇದೇ ವೇಳೆ ವಿನಯ್ ಗುರೂಜಿ ತಿಂದು ಉಳಿದ ಅನ್ನವನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ನೋ ಕಾಮೆಂಟ್, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ. ನಾನೇ ನಿಶ್ಚಯ ಮಾಡಿದ ಮದುವೆ ಅದು. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದೀನಿ, ಲೋಟ ಎಲ್ಲಿಟ್ಟಿದೀನಿ ಎಂದು ನೋಡುವುದಕ್ಕೆ ಆಗುವುದಿಲ್ಲ. ಅದು ನನ್ನ ಗಮನಕ್ಕೆ ಬರದೇ ನಡೆದಿರುವ ಪ್ರಸಂಗ. ಅದು ನನ್ನ ಗಮನಕ್ಕೆ ಬಂದಿದ್ದರೆ ಗಾಂಧಿವಾದದಂತೆ ನಾನು ಖಂಡಿಸುತ್ತಿದ್ದೆ. ಲಿಂಗಾಯಿತರಲ್ಲಿ ಒಂದು ಸಂಪ್ರದಾಯ ಇದೆ. ನಾನು ಊಟ ಮಾಡಿದ ಮೇಲೆ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.









