ನವದೆಹಲಿ : ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೇರಬೇಕಿದ್ದ ಜಿಎಸ್‍ಟಿ ಪಾಲನ್ನು ನೀಡಲು ನಿರಾಕರಿಸುವ ಮೂಲಕ ದ್ರೋಹ ಮಾಡಿದೆ ಎಂದು ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಜಿಎಸ್‍ಟಿ ಬಾಕಿ ಸೇರಿದಂತೆ ಜೆಇಇ, ನೀಟ್, ಯುಜಿಸಿ ಪರೀಕ್ಷೆಗಳ ವಿಷಯ ಕುರಿತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಜಾಖರ್ಂಡ್ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋನಿಯಾ ಗಾಂಧಿ ಸಭೆ ನಡೆಸಿದರು. ಈ ವೇಳೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಕಾಲದಲ್ಲಿ ಜಿಎಸ್‍ಟಿ ಪಾಲು ನೀಡಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಕಾನೂನಿನ ನಿರ್ಣಯವಾಗಿದೆ. ರಾಜ್ಯಗಳಿಂದ ಜಿಎಸ್‍ಟಿ ಸಂಗ್ರಹವಾಗಿದ್ದರೂ ಕೇಂದ್ರ ಸರ್ಕಾರ ಪಾಲು ನೀಡುತ್ತಿಲ್ಲ, ಇದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿದೆ. ಇನ್ನು ಮೂರ ವಾರಗಳಲ್ಲಿ ಸಂಸತ್ ಕಲಾಪ ಆರಂಭವಾಗಲಿದ್ದು, ಸಮನ್ವಯದ ಹೋರಾಟ ಮಾಡಬೇಕಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸಕ್ತ ವರ್ಷದಲ್ಲಿ ರಾಜ್ಯಗಳಿಗೆ ಶೇ.14ರಷ್ಟು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ನರೇಂದ್ರ ಮೋದಿ ಸರ್ಕಾರದ ಈ ಕ್ರಮ ರಾಜ್ಯ ಸರ್ಕಾರಗಳಿಗೆ ಮತ್ತು ದೇಶ ಜನತೆಗೆ ಮಾಡಿದ ದ್ರೋಹ ಎಂದು ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.








