ನವದೆಹಲಿ : ಚಂದನವದ ಕೆಲ ಪ್ರಮುಖ ನಟರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ಡ್ರಗ್ ಡೀಲರ್ ಜೊತೆ ನಂಟಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆಗಸ್ಟ್ 21ರಂದು ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ 145 ಎಂಡಿಎಂಎ ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ನಟರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ಡ್ರಗ್ ಸರಬರಾಜು ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಉಪನಿರ್ದೇಶಕ ಕೆಪಿ ಎಸ್ ಮಲ್ಹೋತ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ ಮೆಂಟ್ ನಿಂದ 145 ಎಂಡಿಎಂಎ ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಂಡಿದ್ದೇವೆ. ನಂತರ ಬೆಂಗಳೂರಿನ ನಿಕೂ ಹೌಸ್ ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್ ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಕೊಂಡಿದೆ.
![]()
ಇದೇ ಕಾರ್ಯಚರಣೆಯ ಮುಂದುವರಿದ ಭಾಗವಾಗಿ, ಪ್ರಕರಣದ ಮುಖ್ಯ ಕಿಂಗ್ ಪಿನ್ ಆಗಿದ್ದ ಲೇಡಿ ಡ್ರಗ್ ಡೀಲರ್ ಬಂಧನವಾಗಿದೆ. ಜೊತೆಗೆ ಬೆಂಗಳೂರಿನ ದೊಡ್ಡ ಗುಬ್ಬಿಯಲ್ಲಿರುವ ಆಕೆಯ ಮನೆಯಿಂದ ಎಂಡಿಎಂಎಯ 270 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ ಎಂ ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ ಡಿ ಎಂಬ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರು, ನಟರು ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬೆಂಗಳೂರು ಎನ್ ಸಿಬಿ ಘಟಕದಿಂದ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮಲ್ಹೋತ್ರಾ ಅವರು ಮಾಹಿತಿ ನೀಡಿದ್ದಾರೆ.









