ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಭೂಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿರುವುದು ರೈತರಿಗೆ ಮಾರಕವಾಗಲಿದೆ. ಹೀಗಾಗಿ ನೂತನ ಭೂಸುಧಾರಣಾ ಕಾಯ್ದೆಯ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ರೈತರ ಹಿತದೃಷ್ಟಿಯಿಂದ ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಭೂಸುಧಾರಣೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಡಿಯೂರಪ್ಪ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೊದಲು ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ಆಗಬೇಕು. ರಾಜ್ಯದ ಲಕ್ಷಾಂತರ ರೈರರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆಗೆ ತಡೆ ನೀಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ತಿಳಿಸಿ ಎಂದು ಸಿದ್ದರಾಮಯ್ಯ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಭೂಸುಧಾರಣೆ ಕಾಯ್ದೆ (1961)ಗೆ 1974ರಲ್ಲಿ ದೇವರಾಜ ಅರಸು ಸೆಕ್ಷನ್ 63, ಸೆಕ್ಷನ್ 79ಎ, ಸೆಕ್ಷನ್ 79ಬಿ,ಸೆಕ್ಷನ್ 79ಸಿ ಹಾಗೂ ಸೆಕ್ಷನ್ 80 ಇವುಗಳನ್ನು ಸೇರಿಸಿ ಪ್ರಗತಿ ಪರವಾದ, ಸಾಮಾಜಿಕ ನ್ಯಾಯ ಕೊಡಿಸಿದಂತಹ ಕ್ರಾಂತಿಕಾರಕ ನಿರ್ಣಯ ಕೈಗೊಂಡರು. ಉಳುವವನೇ ಹೊಲದ ಒಡೆಯ ಎಂಬ ಘೋಷ ವಾಕ್ಯದಂತೆ ಗೇಣಿಗೆ ಹೊಲ ಊಳುತ್ತಿದ್ದ ರೈತರಿಗೆ ಜಮೀನಿನ ಮಾಲೀಕತ್ವದ ಹಕ್ಕು ನೀಡಿದ್ದರು.
1974ರಲ್ಲಿ ದೇವರಾಜ ಅರಸು ಅವರು ತಂದಿದ್ದ ಕಾಯ್ದೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಅಂತಹ ಪ್ರಗತಿಪರವಾದ ನಿರ್ಣಯವನ್ನು ಕರ್ನಾಟಕ ಸರ್ಕಾರ ಈಗ ರದ್ದುಗೊಳಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.









