ಸಿಎಸ್‍ಕೆ ತಂಡದ ವೇಗಿ ದೀಪಕ್ ಚಾಹರ್ ಗೆ ಕೋವಿಡ್ -19 ಸೋಂಕು: ಸಿಎಸ್‍ಕೆ ತಂಡಕ್ಕೆ ಚೆನ್ನೈ ಶಿಬಿರವೇ ಮುಳುವಾಗಿ ಹೋಯ್ತಾ ?
2020ರ ಐಪಿಎಲ್ ಟೂರ್ನಿ ಶುರುವಾಗುವುದಕ್ಕಿಂತ ಮುನ್ನವೇ ಕೋವಿಡ್ ಸೋಂಕು ಕಂಟಕವಾಗಿ ಕಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ದೀಪಕ್ ಚಾಹರ್ ಅವರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 12 ಸಿಬ್ಬಂದಿಗಳು ಕೂಡ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಯುಎಇನಲ್ಲಿ ಸಿಎಸ್‍ಕೆ ತಂಡದ ಆಟಗಾರರು ಮತ್ತು ಸಿಬ್ಬಂದಿಗಳು ಕ್ವಾರಂಟೈನ್ ನಲ್ಲಿದ್ದಾರೆ. ಆದ್ರೆ ಸಿಎಸ್‍ಕೆ ಕ್ಯಾಂಪ್ ನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವುದರಿಂದ ಕ್ವಾರಂಟೈನ್ ಅವಧಿಯನ್ನು ಮುಂದೂಡುವ ಸಾಧ್ಯತೆ ಇದೆ. ಹೀಗಾಗಿ 2020ರ ಐಪಿಎಲ್ ವೇಳಾಪಟ್ಟಿಯಲ್ಲೂ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದು ಅಲ್ಲದೆ ಬಿಸಿಸಿಐ ಇನ್ನೂ ಕೂಡ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ವಾರಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗ ಚೆನ್ನೈ ತಂಡದ ಈ ಬೆಳೆವಣಿಗೆಯಿಂದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಬಿಸಿಸಿಐ ಮೀನಾ ಮೇಷ ಎಣಿಸುತ್ತಿದೆ.
ಈ ಹಿಂದೆ ನಿಗದಿಯಾದಂತೆ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಬೇಕಿತ್ತು. ಮೊದಲ ಪಂದ್ಯದಲ್ಲಿ ಸಿಎಸ್‍ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡ ಕಾದಾಟ ನಡೆಸಬೇಕಿತ್ತು. ಆದ್ರೆ ಸಿಎಸ್‍ಕೆ ತಂಡದ ಈ ಬೆಳವಣಿಗೆಯಿಂದ ಬಿಸಿಸಿಐ ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಸಿಎಸ್‍ಕೆ ತಂಡಕ್ಕೆ ಮುಳುವಾಯ್ತಾ ಚೆನ್ನೈ ಶಿಬಿರ
ಯುಎಇಗೆ ಪ್ರಯಾಣ ಬೆಳೆಸುವುದಕ್ಕಿಂತ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ಒಂದು ವಾರಗಳ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಹರ್ಭಜನ್ ಸಿಂಗ್ ಮತ್ತು ರವೀಂದ್ರ ಜಡೇಜಾ ಹಾಗೂ ವಿದೇಶಿ ಆಟಗಾರರು ಭಾಗವಹಿಸಿಲ್ಲ. ಇನ್ನುಳಿದ ಸಿಎಸ್‍ಕೆ ಆಟಗಾರರು ಶಿಬಿರದಲ್ಲಿ ಭಾಗವಹಿಸಿದ್ದರು. ಈ ತರಬೇತಿ ಶಿಬಿರದ ವೇಳೆಯಲ್ಲೂ ಆಟಗಾರರಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಆದಾದ ನಂತರವೇ ಸಿಎಸ್‍ಕೆ ತಂಡ ಯುಎಇಗೆ ಪ್ರಯಾಣ ಬೆಳೆಸಿತ್ತು.








