ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿದ ಬಾಂಬ್ ಸ್ಫೋಟಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಈ ನಡುವೆ, ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸರು ಕೇಳಿದರೆ ಸ್ಯಾಂಡಲ್‍ವುಡ್‍ನ ಯಾವ ನಟ-ನಟಿ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲು ಸಿದ್ದ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್‍ಗೆ ಸಿಸಿಬಿ ನೋಟೀಸ್ ನೀಡಿದೆ. ಸಿಸಿಬಿಯ ಆಂಟಿ ನಾರ್ಕೋಟಿಕ್ ವಿಂಗ್‍ನಿಂದ ಇಂದ್ರಜಿತ್ ಲಂಕೇಶ್‍ಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದ್ರಜಿತ್‍ಗೆ ಅಗತ್ಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಸೋಮವಾರ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ನಿಮಗಿರುವ ಮಾಹಿತಿಯನ್ನು ಸಿಸಿಬಿ ಜತೆ ಹಂಚಿಕೊಳ್ಳಿ ಎಂದು ನೋಟಿಸ್‍ನಲ್ಲಿ ಸೂಚಿಸಲಾಗಿದೆ.
ಇಂದ್ರಜಿತ್‍ಗೆ ರಕ್ಷಣೆ: ಸಚಿವ ಸಿ.ಟಿ ರವಿ
ಡ್ರಗ್ಸ್ ಮಾರಾಟ ದಂಧೆ ಅಂತಾರಾಷ್ಟ್ರೀಯ ವ್ಯವಸ್ಥಿತ ಜಾಲ. ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳಿರುವ ನಿರ್ದೇಶಕ ಇಂದ್ರಜಿತ್‍ಗೆ ರಕ್ಷಣೆ ನೀಡುತ್ತೇವೆ. ಇಂದ್ರಜಿತ್ ಲಂಕೇಶ್ ತನಿಖೆಗೆ ಸಹಕಾರ ನೀಡಬೇಕು. ಆದರೆ ಅವರು ಯಾರ ಬಗ್ಗೆಯೂ ಭಯ ಪಡುವುದು ಬೇಡ. ಬಹಳ ದಿನಗಳಿಂದ ಸೈಡ್ ಆಕ್ಟರ್‍ಗಳು ಸಿಗುತ್ತಿದ್ದರು. ಈಗ ಮೇನ್ ಆಕ್ಟರ್ ಸಿಗ್ತಾರಾ ನೋಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ ರವಿ ಹೇಳಿದ್ದಾರೆ.









