ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಶಾಕ್.. ಐಪಿಎಲ್ ಬಿಟ್ಟು ಮನೆ ಹಾದಿ ಹಿಡಿದ ಸುರೇಶ್ ರೈನಾ
ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ ಅಂದುಕೊಂಡಂತೆ ನಡೆಯುತ್ತಿಲ್ಲ. ಎಲ್ಲಾ ಫ್ರಾಂಚೈಸಿ ಆಟಗಾರರು ಕೋವಿಡ್ ಶಿಷ್ಟಚಾರ, ಮಾರ್ಗಸೂಚಿಗಳ ಜೊತೆಗೆ ಆರೋಗ್ಯದ ಕಡೆಗೆ ಎಷ್ಟೇ ಗಮನ ಹರಿಸಿದ್ರೂ ಕೋವಿಡ್ ಸೋಂಕು ಸುತ್ತುತ್ತನೇ ಇದೆ. ಈಗಾಗಲೇ ಸಿಎಸ್‍ಕೆ ತಂಡದ ವೇಗಿ ದೀಪಕ್ ಚಾಹರ್ ಸೇರಿದಂತೆ 12 ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢವಾಗಿದೆ. ಹೀಗಾಗಿ ಆತಂಕದಲ್ಲಿರುವ ಸಿಎಸ್‍ಕೆ ತಂಡಕ್ಕೆ ಮತ್ತೊಂದು ಆಘಾತವಾಗಿದೆ.
ಸಿಎಸ್ ಕೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಈಗ ವೈಯಕ್ತಿಕ ಕಾರಣ ನೀಡಿ ಮನೆ ಹಾದಿ ಹಿಡಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರು ಭಾರತಕ್ಕೆ ತೆರಳಲಿದ್ದಾರೆ. ರೈನಾ ಹಾಗೂ ಅವರ ಕುಟುಂಬದ ಜೊತೆ ಸಿಎಸ್‍ಕೆ ತಂಡವಿರಲಿದೆ ಎಂದು ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ.
ಸುರೇಶ್ ರೈನಾ ಅವರ ಅನುಪಸ್ಥಿತಿ ಸಿಎಸ್‍ಕೆ ತಂಡಕ್ಕೆ ಕಾಡಲಿದೆ. ಆದ್ರೆ ಆಟಗಾರನಾಗಿ ಅವರ ನಿರ್ಧಾರವನ್ನು ಸಿಎಸ್‍ಕೆ ಗೌರವಿಸುತ್ತದೆ. ಯಾವುದೇ ಆಟಗಾರನೇ ಆಗಿರಲಿ, ಹಂಡ್ರೆಡ್ ಪರ್ಸೆಂಟ್ ಮನಸ್ಥಿತಿ ಅಥವಾ ಬೇರೆ ಕಾರಣಗಳ ಒತ್ತಡಗಳಿದ್ರೆ ಅವರ ನಿರ್ಧಾರವನ್ನು ಗೌರವಿಸಬೇಕು. ಸಿಎಸ್‍ಕೆ ತಂಡ ರೈನಾ ವಿಚಾರದಲ್ಲಿ ಅದೇ ನಿಲುವನ್ನು ತೆಗೆದುಕೊಂಡಿದೆ ಎಂದು ಸಿಎಸ್‍ಕೆ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಸುರೇಶ್ ರೈನಾ ಅವರು ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಗೆಳೆಯ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳುತ್ತಿದ್ದಂತೆ ಸುರೇಶ್ ರೈನಾ ಕೂಡ ತನ್ನ ನಿರ್ಧಾರವನ್ನು ಪ್ರಕಟಿಸಿದ್ದರು. ಕೋವಿಡ್ -19 ಲಾಕ್ ಡೌನ್ ಟೈಮ್ ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದ ರೈನಾ, ಹಲವಾರು ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿದ್ದರು. ಇದೀಗ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಒಟ್ಟಾರೆ, ಯುಎಇ ನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ಕೋವಿಡ್ ಸೋಂಕಿನ ಕರಿಛಾಯೆ ಬಿದ್ದಿದೆ. ಸದ್ಯ ಸಿಎಸ್‍ಕೆ ತಂಡದ 13 ಜನರು ಕೋವಿಡ್ ಸೋಂಕಿಗೆ ಒಳಪಟ್ಟಿದ್ದಾರೆ. ಇನ್ನುಳಿದ ಫ್ರಾಂಚೈಸಿಗಳು ಅಭ್ಯಾಸದಲ್ಲಿ ನಿರತವಾಗಿದೆ. ಇನ್ನೊಂದೆಡೆ ಸಿಎಸ್‍ಕೆ ಆಟಗಾರರು ಸೆಪ್ಟಂಬರ್ 1ರವರೆಗೆ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಮತ್ತೊಂದೆಡೆ ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನು ಇನ್ನೂ ಕೂಡ ಬಿಡುಗಡೆ ಮಾಡಿಲ್ಲ








