ಜಪಾನ್: ಜಪಾನ್ ನ ಪ್ರಧಾನಿ ಸ್ಥಾನಕ್ಕೆ ಶಿಂಜೊ ಅಬೆ ಅವರು ಅನಾರೋಗ್ಯದ ಕಾರಣದಿಂದ ರಾಜೀನಾಮೆ ನಿಡಿದ್ದರು. ಇದರ ಬೆನ್ನಲ್ಲೇ ನೂತನ ಪ್ರಧಾನಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆಗಳಿದ್ದು, ಇದೀಗ ಪ್ರಧಾನಿ ಹುದ್ದೆಗೆ ಯೋಶಿಹಿದೆ ಸುಗಾ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಶಿಂಜೊ ಅಬೆ ಅವರಿಗೆ ಹಲವು ವರ್ಷಗಳಿಂದ ಆಪ್ತರಾಗಿರುವ ಸುಗಾ ಅವರಿಗೆ ಪ್ರಧಾನಿ ಪಟ್ಟ ಒಲಿಯಲಿದೆ ಎಂಬುವ ಚರ್ಚೆಗಳು ದಟ್ಟವಾಗಿದೆ. ಆದರೆ ಈ ವದಂತಿಗೆ ತೆರೆ ಎಳೆದಿರುವ ಸುಗಾ ಅವರು ಪ್ರಧಾನಿ ಪಟ್ಟಕ್ಕೇರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಇನ್ನೂ ಈ ವಿಚಾರವಾಗಿ ಸ್ಪಷ್ಟನೆ ನಿಡಿರುವ ಸೋಫಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕೋಯಿಚಿ ನಕನಾ ಅವರು ಎಲ್‌ಡಿಪಿ ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಸುಗಾ ಅವರನ್ನು ಶೀಘ್ರದಲ್ಲೇ ನೇಮಕ ಮಾಡಲಿದೆ. ಈ ಮೂಲಕ ಅಬೆ ಸರ್ಕಾರವೇ ಮುಂದುವರಿಯಲಿದೆ ಎಂದಿದ್ದಾರೆ.
ಮತ್ತೊಂದೆಡೆ ಪ್ರಧಾನಿ ಪಟ್ಟದ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಲೇ ಇದೆ. ಮಾಜಿ ರಕ್ಷಣಾ ಸಚಿವರಾದ ಶಿಗೆರು ಇಷಿಬಾ, ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ, ರಕ್ಷಣಾ ಸಚಿವ ತಾರೊ ಕೊನಾ, ಪರಿಸರ ಸಚಿವ ಶಿಂಜಿರೊ ಕೊಯಿಝುಮಿ ಅವರ ಹೆಸರುಗಳು ಸಹ ಆಕಾಂಕ್ಷಿಗಳ ಲಿಸ್ಟ್ ನಲ್ಲಿದೆ.








