ಬೆಂಗಳೂರು: ರಸ್ತೆ ಮಾರ್ಗದಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ರೋ-ರೋ ರೈಲಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದರು.
ಬೆಂಗಳೂರಿನ ನೆಲಮಂಗಲದಿಂದ-ಮಹಾರಾಷ್ಟ್ರದ ಸೋಲಾಪುರ ನಡುವೆ ಈ ರೋ-ರೋ(ರೋಲ್ ಆನ್ ರೋಲ್) ರೈಲು ಸಂಚಾರ ಮಾಡಲಿದೆ.
ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನೂತನ ರೈಲಿಗೆ ಸಿಎಂ ಚಾಲನೆ ನೀಡಿದರು. ಸಿಎಂಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಚಿವರಾದ ಆರ್.ಅಶೋಕ್, ರಮೇಶ್ ಜಾರಕಿಹೊಳಿ ಸಾಥ್ ನೀಡಿದರು.
ನೂತನ ರೈಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸರಕು ತುಂಬಿದ ಹಾಗೂ ಖಾಲಿ ಇರುವ ಟ್ರಕ್‍ಗಳನ್ನು ರೋ-ರೋ ರೈಲಿನ ಮೂಲಕ ಸಾಗಿಸಬಹುದಾಗಿದೆ. ಬೆಂಗಳೂರಿನಿಂದ ಹೊರಡುವ ಟ್ರಕ್‍ಗಳನ್ನು ನೆಲಮಂಗಲದಲ್ಲಿ, ಸೋಲಾಪುರದಿಂದ ಹೊರಡುವ ಟ್ರಕ್‍ಗಳನ್ನ ಬಾಲೆಯಲ್ಲಿ ಹತ್ತಿಸುವ ಹಾಗೂ ಇಳಿಸುವ ಕಾರ್ಯ ಎರಡೂ ಕಡೆ ನಡೆಯಲಿದೆ. ಇದರಿಂದ ಸರಕು-ಸಾಗಣೆ ಕಾರ್ಯ ಶೀಘ್ರಗತಿಯಲ್ಲಿ ನಡೆಯಲಿದೆ ಎಂದರು.
ಗೋಡೋನ್‍ಗಳಲ್ಲಿ ಲೋಡ್ ಮಾಡಿದ ಅಥವಾ ಮಾರುಕಟ್ಟೆಗಳಲ್ಲಿ ಲೋಡ್ ಅಥವಾ ಅನ್‍ಲೋಡ್ ಆದ ಟ್ರಕ್‍ಗಳನ್ನು ರೋ-ರೋ ರೈಲಿಗೆ ಹತ್ತಿಸಲಾಗುತ್ತದೆ. ಸೋಲಾಪುರ ಹಾಗೂ ನೆಲಮಂಗಲ ರೈಲು ನಿಲ್ದಾಣದಲ್ಲಿ ರೈಲು ಬಂದು ನಿಲ್ಲುತ್ತಿದ್ದಂತೆ ಟ್ರಕ್‍ಗಳು ಎಪಿಎಂಸಿ ಮಾರುಕಟ್ಟೆ ಅಥವಾ ನಿಗಧಿ ಸ್ಥಳಗಳಿಗೆ ತೆರಳಿ ಅನ್‍ಲೋಡ್ ಮಾಡುತ್ತವೆ. ಇದರಿಂದ ಹೆದ್ದಾರಿಗಳ ಮೇಲಿನ ಮೇಲಿನ ಒತ್ತಡ, ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಸಮಯ ಉಳಿತಾಯದ ಜತೆಗೆ ಪರಿಸರ ಮೇಲಿನ ಹಾನಿ ಕಡಿಮೆಯಾಗಲಿದೆ. ಅಲ್ಲದೆ ದೂರದ ಸ್ಥಳಗಳಿಗೆ ಚಾಲನೆ ಮಾಡುವುದು ತಪ್ಪುವುದರಿಂದ ಟ್ರಕ್‍ಗಳ ಬಾಳಿಕೆಯೂ ಹೆಚ್ಚಲಿದೆ ಎಂದು ಬಿಎಸ್‍ವೈ ವಿವರ ನೀಡಿದರು.
ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ, ಅಡಿಕೆ ಹಾಗೂ ತೋಟಗಾರಿಕೆ, ಕೈಗಾರಿಕೆ ಉತ್ಪನ್ನಗಳು ಸೋಲಾಪುರಕ್ಕೆ ಸಾಗಿಸಿದರೆ, ಸೋಲಾಪುರದಿಂದ ಈರುಳ್ಳಿ, ಬೇಳೆ ಕಾಳು ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಅನುಕೂಲವಾಗಲಿದೆ. ಈ ಮೊದಲು ಮಂಗಳೂರು-ಕೊಂಕಣ ಮಾರ್ಗವಾಗಿ ರೋ-ರೋ ಸಂಚರಿಸುತ್ತಿದೆ. ಈ ರೈಲು ಸೇವೆ ಇನ್ನು ಮುಂದೆ ಬೆಂಗಳೂರು-ಸೋಲಾಪುರಕ್ಕೆ ಲಭ್ಯವಾಗಲಿದೆ ಎಂದರು.








