ನವದೆಹಲಿ: ಸೆ.17 ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. 70ನೇ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವ ಬಿಜೆಪಿ, ಸೇವಾ ಸಪ್ತಾಹ ಆಯೋಜಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 14ರಿಂದ 20ರವರೆಗೆ ಸೇವಾ ಸಪ್ತಾಹ ನಡೆಯಲಿದ್ದು, ಈ ಅವಧಿಯಲ್ಲಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ.
ಸೇವಾ ಸಪ್ತಾಹ ಆಚರಣೆ ವೇಳೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಬಗ್ಗೆ ಎಲ್ಲಾ ರಾಜ್ಯ ಘಟಕಗಳಿಗೆ ಬಿಜೆಪಿ ಸುತ್ತೋಲೆ ರವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 70ನೇ ವರ್ಷದ ಬರ್ತ್‍ಡೇ ಆಚರಿಸಿ ಕೊಳ್ಳುತ್ತಿರುವುದರಿಂದ ಥೀಮ್-70ಗೆ ಅನುಗುಣವಾಗಿ 70 ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಪ್ರತಿಯೊಂದು ಘಟಕದ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವುದು, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ರಕ್ತದಾನ ಶಿಬಿರ ಆಯೋಜನೆ, ಪ್ರತಿ ಬೂತ್ ಮಟ್ಟದಲ್ಲಿ 70 ಸಸಿಗಳನ್ನು ನೆಡುವುದು, ಸ್ವಚ್ಚತಾ ಆಂದೋಲನ, ಪ್ಲಾಸ್ಟಿಕ್ ನಿರ್ಮೂಲನೆ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ.








