ಕೆಲ ವರ್ಷಗಳ ಹಿಂದೆ ಉತ್ತರಾಖಾಂಡ್ ಪ್ರವಾಸದಲ್ಲಿದ್ದಾಗ ಇಲ್ಲಿ ಬೆಂಗಳೂರಿನಲ್ಲಿ ತಮಿಳರ ಜೊತೆ ಗಲಾಟೆ ಏರ್ಪಟಿತ್ತು, ಅಲ್ಲಿನ ಚಾನೆಲ್ಲುಗಳಲ್ಲಿ, ಡೆಲ್ಲಿಯಲ್ಲೂ ಸಹ ಕನ್ನಡಿಗರು ಜಗಳಗಂಟರು ಎಂಬ ನರೇಟಿವ್ ಕಟ್ಟುಕೊಡುತ್ತಿದ್ದರು. ಹೌದು ಮರಾಠರ ಜೊತೆ ಜಗಳ ಆಡಿದ್ದೇವೆ, ತಮಿಳರ ಜೊತೆ ಇದ್ದೇ ಇದೆ, ಕೇರಳಿಗರ ಜೊತೆಯೂ ಗುದ್ದಾಡಿದ್ದೇವೆ, ತೆಲುಗರ ಜೊತೆಯೂ ಜಗಳವೆತ್ತಿದ್ದು ಇದೆ. ಏಕೆಂದರೆ ನಮ್ಮ ಭೌಗೋಳಿಕ ಸ್ಥಾನ ಆ ರೀತಿ ಇದೆ, ಸುತ್ತಲೂ ಪಿಶ್ ಪೀಡೆಗಳಂತೆ ಜನ ಸುತ್ತುವರಿದಾಗ ಬದುಕಬೇಕಾದರೆ ಜಗಳಗಂಟರಾಗಬೇಕಾಗುತ್ತದೆ. ಇದು ನೆನ್ನೆ ಇವತ್ತಿನದಲ್ಲ, ಸದಾ ಕಾಲ ನಮ್ಮನ್ನು ಕೆಣಕುತ್ತಾ ಬಂದಿದ್ದಾರೆ ಇವರೆಲ್ಲಾ, ಕನೋಜನ ಹರ್ಷನ ವರಸೆ ಬಿಡಿ, ನಮ್ಮಿಂದಲೇ ಬೆಳೆದು, ನಮ್ಮದೇ ಆಶ್ರಯ ಪಡೆದು, ಪ್ರಥಮ ಶಾಸನವೂ ಶ್ರವಣಬೆಳಗೊಳದಲ್ಲಿರುವ ಮರಾಠರು ನಮಗೆ ಬೆದರಿಸಿದ್ದಾರೆ, ಏಕೀಕರಣ ಹೋರಾಟದ ಕಿಡಿ ಬಂದಿದ್ದೇ ಅಲ್ಲಿಂದ, ಬಲಪಂಥೀಯ, ಗಿಂಥೀಯ, ಗೊಂಥೀಯ ಎಲ್ಲರೂ ಮರಾಠರ ಕುಚೋದ್ಯ ಕಂಡೇ ಬೇಸತ್ತು ಕರ್ನಾಟಕದ ಕೂಗಿಗೆ ಬಂದದ್ದು, ಈ ವಿಚಾರವಾಗಿ ಆಲೂರರನ್ನೇ ತೆಗೆದುಕೊಳ್ಳಬಹುದು, ಇನ್ನು ತಮಿಳರಂತೂ ವಾತಾಪಿಗೆ ನುಗ್ಗಿ ಬೆನ್ನಿಗೆ ಚೂರಿ ಹಾಕಿದ ಪರಂಪರೆಯವರು. ಬ್ರಿಟಿಷರ ಜೊತೆ ಕೂಡಿಕೆಯಲ್ಲಿ ಕರ್ನಾಟಕದ ಇತಿಹಾಸವನ್ನೇ ತಿರುಚಿಬಿಟ್ಟವರು. ತೆಲುಗರು ಮುಂದೆ ಮುಂದೆ ನಿಂತು ಹೊಡೆದಾಡಿದವರಲ್ಲ, ಅವರದ್ದು ಒಳಗಿನ ಆಟ. ಇನ್ನು ಕೇರಳದವರು ತಮಿಳರ ಸಾಮಂತ ಜನರಾಗಿದ್ದವರು.
ರಾಜಕೀಯವಾಗಿ ಇಂಥಾ ವಿಷಣ್ಣ ಭೂಭಾಗವನ್ನು ಹೊಂದಿ, ಇವರನ್ನೆಲ್ಲಾ ಸವರಿಸಿಕೊಂಡು, ಈ ಮಧ್ಯೆ ಡೆಲ್ಲಿ, ಲಂಡನ್ನುಗಳಿಗೂ ಎದೆ ಕೊಟ್ಟು, ತಲೆ ಕೊಟ್ಟು ಅದೆಷ್ಟು ಸವೆದಿದ್ದೇವೆ ನಾವು ಕನ್ನಡಿಗರು! ಆಗಾಗ ಈ ನೋವು ತಾಳಲಾರದೇ ಏಳುತ್ತೇವೆ, ಎದ್ದಾಗ ಓಹ್ ಜಗಳಗಂಟರು, ಯಾರ ಜೊತೆಯೂ ಸೌಹಾರ್ದವಿಲ್ಲ ಇವರಿಗೆ ಎಂಬಂಥ ನರೇಟಿವ್.
ನಾವು ಹುಟ್ಟಿದ ನಾಡು ಎಂಬ ಭಾವನಾತ್ಮಕ ನಿಲುವು ಬಿಡಿ, ತಾರ್ಕಿಕವಾಗಿ ನಾವು ಈ ಸುತ್ತಲಿನವರಿಂದ ತೆಗೆದುಕೊಂಡದ್ದಕ್ಕಿಂತ ಕೊಟ್ಟದ್ದೇ ಹೆಚ್ಚು. ಅವರ ಮುಖಗಳಲ್ಲಿ ಎಂದಾದರು ಒಮ್ಮೆ ಆ ಋಣಭಾರ ಕಂಡಿದೆಯಾ? ಭಾಷೆಯ ವಿಚಾರದಲ್ಲಿ ಸಂಸ್ಕೃತವನ್ನು ಒಪ್ಪಿಕೊಂಡದ್ದಿದೆ, ತಮಿಳನ್ನು ಒಪ್ಪಿಕೊಂಡದ್ದಿದೆ, ಪ್ರಾಕೃತವನ್ನು ಬಿಟ್ಟುಕೊಂಡದ್ದಿದೆ, ಹೊಸ ಭಾಷೆಗಳನ್ನು ಕೊಡುತ್ತಾ ಬಂದದ್ದಿದೆ, ನೆರೆ ಭಾಷೆಗಳಿಗೆ ಬೆನ್ನು ಕೊಟ್ಟದ್ದು ಇದೆ. ಯಾವುದೂ ಬೇಡವೆನ್ನದ, ಎಲ್ಲವನ್ನೂ ಒಳಗೊಂಡ ಏಕೈಕ ರಾಜ್ಯ ಭಾರತದಲ್ಲಿದೆ/ಭರತ ವರ್ಷದಲ್ಲಿದೆ ಎಂದರೆ ಅದು ಕರ್ನಾಟಕ. ಬಾಂಬೆಯನ್ನು ಈ ವಿಚಾರವಾಗಿ ಹೊಗಳುವ ಕೊಂಕಣ ಸಾಹಿತಿಯನ್ನು ಕಂಡಿದ್ದೇವೆ. ಕೊಂಕಣರೇ ನಿಮಗೆ ಪೋರ್ಚುಗೀಸರು ಬಡಿದಾಗ ನೆಲ ಕೊಟ್ಟದ್ದು ಈ ಕನ್ನಡ ಭೂಮಿ ಎಂಬುದು ಮರೆಯಬೇಡಿರಯ್ಯಾ.
ಅಸಲಿಗೆ ಕೊಂಕಣದಲ್ಲೇ ಕನ್ನಡದ ಮೂಲಸ್ರೋತವಿದೆ. ಹೌದು ನಾವು ಜಗಳಗಂಟರು, ಮಿರ್ಜಾ ಇಸ್ಮಾಯಿಲ್ಲರೇ ಶಿವಾಜಿ ಪ್ರತಿಮೆ ಜೆಸಿ ರೋಡಲ್ಲಿ ಅನಾವರಣ ಮಾಡಿದಾಗ ಚಪ್ಪಾಳೆ ಹೊಡೆದವರು, ಬಿಳೇಕಳ್ಳಿಯನ್ನು, ಬ್ರಿಟಿಷರು ಬ್ಲಾಕ್ ಪಲ್ಲಿ ಎಂದು, ನಂತರ ಕಾಂಗ್ರೆಸ್ಸಿಗರೇ ಅದಕ್ಕೆ ಶಿವಾಜಿ ನಗರ ಎಂದು ನಾಮಕರಣ ಮಾಡಿದಾಗ, ಇಲ್ಲಿರುವ ಮರಾಠರನ್ನು ತಬ್ಬಿ “ಇರಲಿ ಬಿಡಯ್ಯಾ ಹೇಗಿದ್ದರೂ ಶಿವಾಜಿ ಬೆಂಗಳೂರಿಗೆ ಬಂದಿದ್ದನಲ್ಲ, ಒಂದು ನಂಟು ಇರಲಿ” ಎಂದವರು, ಹೌದು ನಾವು ಜಗಳಗಂಟರು!
ಲೇಖನ:- ಕರಣಂ ಪವನ್ ಪ್ರಸಾದ್
ಖ್ಯಾತ ನಾಟಕಕಾರ, ಕಾದಂಬರಿಕಾರ








