ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿರ್ವಹಣೆಗೆ ಸಂಬಂಧಿಸಿದಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಈ ವೇಳೆ ಜುಲೈ ಹಾಗೂ ಆಗಸ್ಟ್ ನಡುವಿನ ಸೋಂಕು ಪ್ರಕರಣಗಳಿಗೆ ಹೋಲಿಕೆ ಮಾಡಿ ತಿಳಿಸಿದ ಆಯುಕ್ತರು ಆಗಸ್ಟ್ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಪ್ರತಿನಿತ್ಯ ಹೆಚ್ಚು-ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜುಲೈ ತಿಂಗಳಲ್ಲಿ ದಿನಕ್ಕೆ 3,000 ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ದಿನಕ್ಕೆ 30,000 ಪರೀಕ್ಷೆ ಮಾಡಲಾಗುತ್ತಿದ್ದು, ಪಾಸಿಟಿವಿಟಿ ರೇಟ್ ಶೇ.10 ರಷ್ಟಾಗಿದೆ. ಎಂದು ತಿಳಿಸಿದರು.
ಇದೇ ವೇಳೆ ಸೋಂಕು ಪ್ರಕರಣಗಳು ಹೆಚ್ಚಾದರೆ ಯಾವುದೇ ಭಯಪಡುವ ಅಗತ್ಯವಿಲ್ಲ. ಹೆಚ್ಚು ಪರೀಕ್ಷೆ ಮಾಡುವುದರಿಂದ ಸೋಂಕು ದೃಢಪಟ್ಟವರನ್ನು ಮೂಲದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸೋಂಕು ಹರಡುವ ಸಂಖ್ಯೆ ಕಡಿಮೆಯಾಗಲಿದೆ. ಇತ್ತೀಚೆಗೆ ಮಾರ್ಟಾಲಿಟಿ ರೇಟ್ ಕೂಡಾ ಕಡಿಮೆ ಆಗುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಶೇ. 1.52 ಆಗಿದೆ. ಪಾಲಿಕೆಯು ದಿನಕ್ಕೆ ಇಷ್ಟು ಪರೀಕ್ಷೆ ಮಾಡಬೇಕೆಂಬ ಗುರಿ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಖಾಯಿಲೆಗಳಿರುವ 50 ವರ್ಷ ಮೇಲ್ಪಟ್ಟವರಿಗೆ, ಸೋಂಕು ಲಕ್ಷಣಗಳಿರುವ, ILI, SARI ಹಾಗೂ ಪ್ರಾಥಮಿಕ ಸಂಪರ್ಕಿತರು ಮತ್ತು ಕಂಟೈನ್ಮೆಂಟ್ ಪ್ರದೇಶದಲ್ಲಿರುವವರಿಗೆ ಪರೀಕ್ಷೆ ಮಾಡಲಾಗುವುದು. ಇಂತಹವರು ಕೂಡಲೆ ಪರೀಕ್ಷೆ ಮಾಡಿಸಿಕೊಂಡರೆ ಮೂಲದಲ್ಲೇ ಸೋಂಕು ಹರಡುವುದನ್ನು ಹಾಗೂ ಸಾವುಗಳನ್ನು ತಡೆಯಬಹುದು. ಅದಕ್ಕೆ ಸಾರ್ವಜನಿಕರು ಕೂಡಾ ಸಹಕರಿಸಬೇಕಾಗುತ್ತದೆ ಎಂದರು.








