ಮೈಸೂರು: ಸಿನಿಮಾ ರಂಗದಲ್ಲಿ ಕ್ರೈಂ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ಕತ್ತಲೆಯ ಪ್ರಪಂಚ ವೈಭವೀಕರಣ ಆಗುತ್ತಿದೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಮಡಿವಂತಿಕೆ ಬೇಡ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಸರ್ಕಾರ ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ತೊಡಗಿಸಿಕೊಂಡಿರುವವರನ್ನು ಮಟ್ಟಹಾಕಬೇಕು. ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಮ್ಮ ಮನೆಯ ಮಕ್ಕಳು ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿ. ಈ ವಿಚಾರದಲ್ಲಿ ನಮ್ಮ ಮಕ್ಕಳು, ನಮ್ಮ ಪಕ್ಷ, ನಮ್ಮ ಜಾತಿ ಎಂದು ತಪ್ಪಿತಸ್ಥರ ರಕ್ಷಣೆಗೆ ಮುಂದಾಗಬಾರದು ಎಂದರು.
ಇದೇ ವೇಳೆ ಇಂದ್ರಜಿತ್ ಲಂಕೇಶ್ ಬಗ್ಗೆ ಮಾತನಾಡಿದ ವಿಶ್ವನಾಥ್, ಡ್ರಗ್ಸ್ ವಿಚಾರ ಬೆಳಕಿಗೆ ತಂದ ಇಂದ್ರಜಿತ್ ಲಂಕೇಶ್ ಅವರನ್ನು ಈಗ ಗೇಲಿ ಮಾಡಲಾಗುತ್ತಿದೆ. ನನಗೆ ರಕ್ಷಣೆ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನೂ ಸೆಲೆಬ್ರಿಟಿಯೇ ಮಾಡಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. ಈ ವಿಚಾರ ಗಂಭೀರವಾಗಿದ್ದು, ಇದರ ಗಾಂಭೀರ್ಯತೆಯನ್ನು ಅರಿತು ಮಾತನಾಡಬೇಕು ಎಂದು ಹೇಳಿದರು.
ರೇವ್ ಪಾರ್ಟಿ ಮಾಡುವವರು ಯಾರು? ಇಂದು ಚಿತ್ರರಂಗ ಏನಾಗಿದೆ. ಸಿನಿಮಾ ರಂಗದಲ್ಲಿ ಕ್ರೈಮ್ ವೈಭವೀಕರಣ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ನಶೆ, ಕತ್ತಲೆಯ ಪ್ರಪಂಚ ಹಾಗೂ ಶ್ರೀಮಂತಿಕೆಯ ವೈಭವೀಕರಣವಾಗುತ್ತಿದೆ. ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಏನನ್ನೂ ಹೇಳಲಾಗುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಸ್ಥಳದ ರಾಜಕಾರಣ ಕಾರಣವಾಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.








