ಬೆಂಗಳೂರಿಗರೇ ಎಚ್ಚರ.. ಒಂದೆಡೆ ಅಮೆರಿಕದಿಂದ ಹಿಂತಿರುಗಿದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಗೆ ಕೊರೋನಾ ಖಚಿತವಾಗಿದ್ದು, ರಾಜ್ಯಕ್ಕೆ ಕೊರೋನಾ ವೈರಸ್ ಕಾಲಿಟ್ಟಿದೆ. ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದೆ.
ಕಾಲರಾದ ಲಕ್ಷಣಗಳನ್ನು ಹೋಲುವ, ಆದರೆ ರಕ್ತ ಪರೀಕ್ಷೆಯಲ್ಲಿ ಕಾಲರಾ ಬ್ಯಾಕ್ಟೀರಿಯಾಗಳು ಪತ್ತೆಯಾಗದ ಹೊಸ ಕಾಯಿಲೆಯೊಂದು ಇದೀಗ ಕಾಣಿಸಿಕೊಂಡಿದ್ದು, ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವ ಮೊದಲು ಎಚ್ಚರ ವಹಿಸಬೇಕಾಗಿದೆ.
ನಗರದ ಅನೇಕ ಆಸ್ಪತ್ರೆಗಳಲ್ಲಿ ಅತಿಸಾರ, ನಿರ್ಜಲೀಕರಣ, ವಾಂತಿ ಮತ್ತು ಬಳಲಿಕೆ ಮುಂತಾದ ಕಾಲರಾ ರೋಗ ಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ರೋಗಿಗಳು ದಾಖಲಾಗಿದ್ದಾರೆ. ಆದರೆ ರಕ್ತ ಪರೀಕ್ಷೆಯಲ್ಲಿ ಕಾಲರಾ ತರುವ ವಿಬ್ರಿಯೊ ಬ್ಯಾಕ್ಟೀರಿಯಾಗಳು ಪತ್ತೆಯಾಗಿಲ್ಲ.
ದಿನೇ ದಿನೇ ಅತಿಸಾರ, ವಾಂತಿ ಭೇದಿ ಮತ್ತು ಜಠರಕರುಳಿನ ಸಮಸ್ಯೆಯಿಂದ ಜನ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚುತ್ತಿದ್ದು, ವೈದ್ಯರು, ಯಾವ ರೀತಿಯ ಚಿಕಿತ್ಸೆ ಕೊಡುವುದು ಎಂದು ಚಿಂತಾಕ್ರಾಂತರಾಗಿದ್ದಾರೆ.
ಬಿಸಿ ಮಾಡಿ ಆರಿಸಿದ ಶುದ್ಧ ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದು, ಬೀದಿ ಬದಿಯಲ್ಲಿ ಚಾಟ್ಸ್, ಸ್ವಚ್ಛತೆಯಿಲ್ಲದ ಆಹಾರ ತಿನ್ನಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಬೇಸಿಗೆಯ ಸಮಯದಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ಸಮಸ್ಯೆಯನ್ನು ತರುವ ಸಂಭವವಿದೆ ಎಂದು ಹೇಳಿದ್ದಾರೆ.








