ದಾವಣಗೆರೆ : ಡ್ರಗ್ಸ್ ನ ಹಣದಿಂದಲೇ ನಮ್ಮ ಮೈತ್ರಿ ಸರ್ಕಾರವನ್ನು ಕೆಡವಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿ ಎಂದು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಡ್ರಗ್ಸ್ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡುತ್ತಾರೆ. ಹಾಗಾದ್ರೆ ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿಯವರನ್ನು ಕೂಡ ವಿಚಾರಣೆಗೆ ಒಳಪಡಿಸಿ. ಇತ್ತಿಚಿನ ದಿನಗಳಲ್ಲಿ ಡ್ರಗ್ಸ್ ಹೆಸರು ಕೇಳಿಬರುತ್ತಿದೆ. ಇದೊಂದು ಡ್ರಗ್ಸ್ ಜಿಹಾದ್ ಎಂದೇ ಹೇಳಬಹುದು. ಮುಸ್ಲಿಂಮರಿಂದ ಬಹು ದೊಡ್ಡ ಕಾರ್ಯ ದಂಧೆ ನಡೆಯುತ್ತದೆ. ಯುವ ಜನತೆಯನ್ನು ದುರ್ಬಲ ಮಾಡಬೇಕು ಎನ್ನುವುದು ಅವರ ಉದ್ದೇಶ. ಪೊಲೀಸರಿಗೆ ಹಾಗೂ ಡ್ರಗ್ಸ್ ಮಾಫಿಯಾದವರಿಗೆ ಲಿಂಕ್ ಇದೆ. ಎಲ್ಲೆಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ರಾಜಕೀಯ ಶಕ್ತಿಗಳು ಇವರ ಕೈ ಕಟ್ಟಿಹಾಕುತ್ತಿದ್ದಾರೆ ಎಂದು ರಾಜಕಾರಣಿಗಳ ವಿರುದ್ಧ ಆರೋಪ ಮಾಡಿದರು.
ಇದೇ ವೇಳೆ ಕರ್ನಾಟಕ ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಫಲವಾಗಿದೆ ಎಂದು ಆರೋಪಿಸಿದ ಮುತಾಲಿಕ್, ಡ್ರಗ್ ಮಾಫಿಯಾವನ್ನು ತಡೆಯಲು ಎಲ್ಲಾ ಪಕ್ಷದವರು ವಿಫಲವಾಗಿದ್ದಾರೆ. 2009 ರಲ್ಲಿ ಪಬ್ ಗಲಾಟೆಯಾದಾಗ ಇದನ್ನು ತಡೆಗಟ್ಟಬಹುದಿತ್ತು. ನಾನು ಆಗಲೇ ಪಬ್ ಗಳಲ್ಲಿ ಡ್ರಗ್ಸ್ ನಡೆಯುತ್ತದೆ ಅಂತ ಹೇಳಿದ್ದೆ. ಆದರೆ ನನ್ನನ್ನು ಜೈಲಿಗೆ ಹಾಕಿದ್ರು. ಹ್ಯಾರಿಸ್ ಮಗ ನೆಲಪಾಡ್ ಗಲಾಟೆಯಾಯ್ತು. ಆಗ ಶೋಭಾ ಕರಂದ್ಲಾಜೆ ಹೇಳಿದ್ರು ಡ್ರಗ್ಸ್ ವಿಚಾರದಲ್ಲಿ ಗಲಾಟೆಯಾಗಿದೆ ಎಂದಿದ್ದರು. ಈಗ ನಿಮ್ಮದೇ ಸರ್ಕಾರವಿದೆ ಈಗ ಏನ್ ಮಾಡ್ತಾರೆ ನೋಡೋಣ ಎಂದರು.








