ಯುಎಸ್ ಓಪನ್ ಟೆನಿಸ್- ಪುರುಷರ ಸಿಂಗಲ್ಸ್ : ಡಾಮ್ನಿಕ್ ಥೀಮ್ ವಿರುದ್ಧ ಸೋತು ಹೋದ ಭಾರತ ಸುಮಿತ್ ನಗಾಲ್
ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಸುಮಿತ್ ನಗಾಲ್ ಅವರ ಹೋರಾಟ ಅಂತ್ಯಗೊಂಡಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಸುಮಿತ್ ನಗಾಲ್ ಅವರು 3-6, 3-6, 2-6ರಿಂದ ಎರಡನೇ ಶ್ರೇಯಾಂಕಿತ ಡಾಮ್ನಿಕ್ ಥೀಮ್ ಅವರಿಗೆ ತಲೆಬಾಗಿದ್ರು.
27ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಡಾಮ್ನಿಕ್ ಥೀಮ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ. ಟೂರ್ನಿಯಲ್ಲಿ ಎರಡನೇ ಶ್ರೇಯಾಂಕವನ್ನು ಪಡೆದುಕೊಂಡಿರುವ ಥೀಮ್ ಅವರು ಅಗ್ರ ಶ್ರೇಯಾಂಕಿತ ನೊವಾಕ್ ಜಾಕೊವಿಕ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ ಅನುಪಸ್ಥಿತಿಯಿಂದ ಡಾಮ್ನಿಕ್ ಥೀಮ್ ಅವರಿಗೆ ಪ್ರಶಸ್ತಿ ಗೆಲ್ಲಲು ಜಾಕೊವಿಕ್ ಮಾತ್ರ ಅಡ್ಡಿಯನ್ನುಂಟು ಮಾಡಬಹುದು. ಇನ್ನುಳಿದಂತೆ ಥೀಮ್ ಈ ಬಾರಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ಡಾಮ್ನಿಕ್ ಥೀಮ್ ಅವರು 2014ರ ಚಾಂಪಿಯನ್ ಮರೀನ್ ಸಿಲಿಕ್ ಅವರನ್ನು ಎದುರಿಸಲಿದ್ದಾರೆ. ಸಿಲಿಕ್ ಅವರು 6-3, 1-6, 7-6, 7-5ರಿಂದ ಸ್ಲೊವೇಕಿಯಾದ ನೊಬರ್ಟ್ ಗೊಂಬೋಸ್ ಅವರನ್ನು ಸೋಲಿಸಿದ್ದರು.
ಇನ್ನು ಡೇನಿಲ್ ಮೆಡ್ವೆಡೇವ್ ಅವರು 6-3, 6-2, 6-4ರಿಂದ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಓ ಕಾನೆಲ್ ಅವರನ್ನು ಸೋಲಿಸಿದ್ರೆ, ಎಂಟನೇ ಶ್ರೇಯಾಂಕಿತ ರೊಬರ್ಟ್ ಬಾಸ್ಟಿಸ್ಟ ಅವರು 6-3, 3-6, 6-3, 6-4ರಿಂದ ಸರ್ಬಿಯಾದ ಮಿಯೊಮಿರ್ ಕೆಮನೊವಿಕ್ ಅವರನ್ನು ಮಣಿಸಿದ್ರು.








