ಬೆಂಗಳೂರು : ಡ್ರಗ್ಸ್ ಮಾಫಿಯಾ ವಿಚಾರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನಾಳೆ ರಾಜ್ಯದ ಎಲ್ಲ ಜಿಲ್ಲೆಗಳ ಎಸ್ ಪಿಗಳ ಜೊತೆ ಸಭೆ ನಡೆಸಲಿದ್ದಾರೆ.
ಡ್ರಗ್ಸ್ ಮಾಫಿಯಾ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಡ್ರಗ್ಸ್ ದಂಧೆಗೆ ಕಡಿವಾಣ ಹಾಕೋವರೆಗೂ ಕಾರ್ಯಾಚರಣೆ ನಿಲ್ಲದು. ಡ್ರಗ್ಸ್ ಜಾಲದ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಪ್ರಗತಿ ಕಾಣುತ್ತಿದೆ. ತನಿಖೆಯಲ್ಲಿ ಹೊಸ ಆಯಾಮಗಳು ಸಿಗುತ್ತಿವೆ. ಡ್ರಗ್ಸ್ ಪೂರೈಕೆಯ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡನೆ ಹಂತದ ನಗರಗಳಲ್ಲೂ ಡ್ರಗ್ಸ್ ಜಾಲಗಳಿದ್ದು, ಅಲ್ಲಿಯೂ ನಿಯಂತ್ರಣ ಹೇರುವ ನಿಟ್ಟಿನಲ್ಲಿ ನಾಳೆ ಜಿಲ್ಲೆಗಳ ಎಸ್ಪಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಗಿಣಿ ನಿವಾಸದ ಮೇಲೆ ಸಿಸಿಬಿ ದಾಳಿ ಬಗ್ಗೆ ಮಾತನಾಡಿದ ಅವರು, ಚಿತ್ರನಟಿ ರಾಗಿಣಿ ನಿವಾಸದ ಮೇಲಿನ ದಾಳಿ ಸಿಸಿಬಿ ತನಿಖೆಯ ಒಂದು ಭಾಗವಾಗಿದೆ. ಕಾನೂನು ಪ್ರಕಾರ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿಸಿಬಿ ತೆಗೆದುಕೊಳ್ಳಲಿದೆ. ಸಿಸಿಬಿ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಸ್ಪಷ್ಟಪಡಿಸಿದರು.








