ಬೆಂಗಳೂರು: ತುಪ್ಪದ ಬೆಡಗಿ ನಂತರ ಮತ್ತೊರ್ವ ಮಾದಕ ಬೆಡಗಿ ಸಂಜನಾ ಗಲ್ರಾನಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ.
ನಿನ್ನೆ ಬೆಳಗಿನ ಜಾವ ರಾಹುಲ್‍ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎರಡು ದಿನಗಳ ತೀವ್ರ ವಿಚಾರಣೆ ಬಳಿಕ ರಾಹುಲ್ ಡ್ರಗ್ಸ್ ದಂಧೆಯ ಜಾಲದೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಇಂದು ರಾಹುಲ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇಂದು ಸಂಜೆ ಅಥವಾ ನಾಳೆ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ರಾಹುಲ್, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ. ಸ್ಯಾಂಡಲ್‍ವುಡ್ ಸೇರಿದಂತೆ ಅನೇಕ ಪ್ರಭಾವಿಗಳ ಜತೆಗೂ ಸಂಪರ್ಕ ಹೊಂದಿದ್ದ. ಶ್ರೀಲಂಕಾಲದಲ್ಲಿ ರಾಹುಲ್ ಕ್ಯಾಸಿನೋ ನಡೆಸುತ್ತಿದ್ದ. ಅಲ್ಲಿಗೆ ಆಗಾಗ್ಗೆ ನಟಿ ಸಂಜನಾ ಜೊತೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಈತ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಪ್ರಭಾವಿಗಳು, ನಟ-ನಟಿಯರು ಬರುತ್ತಿದ್ದರು. ಈ ಪಾರ್ಟಿಗಳಿಗೆ ಬರುವವರಿಗೆ ಡ್ರಗ್ಸ್ ಪೆಡ್ಲರ್‍ಗಳಿಂದ ಖರೀದಿ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ನಿನ್ನೆ ರಾಗಿಣಿ ಫ್ರೆಂಡ್ ರವಿಶಂಕರ್‍ನನ್ನು ಬಂಧಿಸಿದ ನಂತರ ಎರಡನೇ ಬಾರಿಗೆ ನೋಟಿಸ್ ನೀಡಿ ಇಂದು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ರಾಹುಲ್‍ನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ನಟಿ ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
*****************








