ಎಲ್ಲೆಂದರಲ್ಲಿ ಬೆಳೆಯುವ ಉತ್ತರಾಣಿಯ ಆಯುರ್ವೇದದ ಉಪಯೋಗಗಳು ಕಲ್ಪನೆಗೂ ನಿಲುಕದ್ದು:
ಯಾವ ಸಹಾಯವೂ ಇಲ್ಲದೇ ಎಲ್ಲೆಡೆ ಬೆಳೆಯುವ ಗಿಡವೆಂದರೆ ಅದು ಉತ್ತರಾಣಿ. ಯಜುರ್ವೇದದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಭಾರತದಲ್ಲಿ ಈ ಉತ್ತರಾಣಿಯು ಕಳೆಯಂತೆ ಬೆಳೆಯುವ ಸಸ್ಯ. ನೀರಿನಂಶ ಹೆಚ್ಚಿದ್ದಲ್ಲಿ ಉತ್ತರಾಣಿಯದ್ದೇ ಸಾಮ್ರಾಜ್ಯ. ಶರೀರದಲ್ಲಿ ದೂಷಿತವಾಗಿರುವ ರಸಾದಿ ಧಾತುಗಳನ್ನು ಇದು ಶುದ್ಧೀಕರಿಸಬಲ್ಲದು. ಹೀಗಾಗಿಯೇ ಇದಕ್ಕೆ ಅಪಾಮಾರ್ಗ ಎಂಬ ಹೆಸರೂ ಇದೆ. ಉತ್ತರಾಣಿಯಲ್ಲಿ ವಿಷನಾಶಕ ಗುಣವಿರುವುದರಿಂದ ಎಲೆಗಳ ರಸವನ್ನು ಕೈಗಳಿಗೆ ಹಚ್ಚಿಕೊಂಡು ಚೇಳನ್ನು ಹಿಡಿಯಬಹುದು ಎಂದೂ ಹೇಳುತ್ತಾರೆ.
ಇನ್ನು ಈ ಉತ್ತರಾಣಿಗೆ ಸಂಸ್ಕೃತದಲ್ಲಿ ಅಪಾಮಾರ್ಗ, ತುಳುವಿನಲ್ಲಿ ಉತ್ತರಾಣಿ, ಹಿಂದಿಯಲ್ಲಿ ಚಿರಚಿಂಟಾ, ಇಂಗ್ಲೀಷ್ ನಲ್ಲಿ ಪ್ರಿಕ್ಲಿಚಪ್ ಫ್ಲವರ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ ಶಿಕಾರಿ, ಮಯೂರಕ, ಮರ್ಕಟಹಿಪ್ಪಲೀ, ಕುಬ್ಜ, ಮಯೂರಶಿಖಾ ಎಂಬ ಇನ್ನಿತರ ಹೆಸರುಗಳೂ ಇವೆ.
ಕಾಂಡವು ಗಂಟುಗಂಟಾಗಿರುವ ಈ ಗಿಡವು ಪೊದೆಯಾಕಾರದಲ್ಲಿ ಅರ್ಧದಿಂದ ಒಂದು ಮೀಟರ್ ನಷ್ಟು ಎತ್ತರವಾಗಿ ಬೆಳೆಯುತ್ತದೆ. ಎಲೆಗಳು ದುಂಡಾಗಿದ್ದು 5 ಸೆಂಟಿಮೀಟರ್ ನಷ್ಟು ಉದ್ದವಾಗಿ, 3 ರಿಂದ 4 ಸೆಂಟಿಮೀಟರ್ ನಷ್ಟು ಅಗಲವಾಗಿ ಮೃದುವಾಗಿರುವುದು. ಇದರ ಹೂವು ಹಸಿರು ಮತ್ತು ಬಿಳಿ ಮಿಶ್ರಿತ ಬಣ್ಣದಿಂದ ಕೂಡಿದೆ. ಉತ್ತರಾಣಿಯಲ್ಲಿ ಎಷ್ಟು ವಿಧಗಳಿವೆ ಎಂಬ ಕುರಿತು ಸ್ವಲ್ಪ ಗೊಂದಲಗಳಿವೆ. ಕೆಲವು ಬಿಳಿ ಉತ್ತರಾಣಿ ಮತ್ತು ಕೆಂಪು ಉತ್ತರಾಣಿ ಮಾತ್ರ ಇದೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಳಿ, ಕೆಂಪು ಬಣ್ಣಗಳ ಜೊತೆಗೆ ನೀಲಿ ಉತ್ತರಾಣಿ ಎಂಬ ಮೂರನೆಯ ವಿಧವನ್ನೂ ಗುರುತಿಸುತ್ತಾರೆ. ಬೇರು, ಬೀಜ, ಎಲೆ ಪ್ರಮುಖವಾಗಿ ಔಷಧಿಯಲ್ಲಿ ಬಳಸಲ್ಪಡುತ್ತವೆ.
ಗಾಯದಲ್ಲಿ ರಕ್ತ ಸುರಿಯುತ್ತಿದ್ದರೆ, ಆ ಭಾಗಕ್ಕೆ ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಹಾಕಬೇಕು. ಆಗ ರಕ್ತಸ್ರಾವ ನಿಲ್ಲುತ್ತದೆ ಮತ್ತು ಗಾಯವು ಬಹಳ ಬೇಗ ಗುಣವಾಗುತ್ತದೆ. ಉತ್ತರಾಣಿಯ ರಸವನ್ನು ಹಿಪ್ಪಲಿ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ, ಕೆಮ್ಮು ರೋಗವು ಗುಣವಾಗುತ್ತದೆ. ಬಿಳಿ ಉತ್ತರಾಣಿಯ ಬೇರನ್ನು ಶುದ್ಧವಾಗ ನೀರಿನಲ್ಲಿ ತೇದು, ಸ್ತನಗಳ ಮೇಲೆ ಲೇಪಿಸುವುದರಿಂದ ತಾಯಂದಿರ ಎದೆ ಹಾಲು ಹೆಚ್ಚುತ್ತದೆ. ಇಲಿವಿಷ, ಸರ್ಪವಿಷ ಮತ್ತು ಚೇಳಿನ ವಿಷ ದೇಹದಲ್ಲಿದ್ದರೆ ಉತ್ತರಾಣಿಯ ಬೇರನ್ನು ಜಜ್ಜಿ ಅದರ ರಸವನ್ನು ವಿಷವಿಳಿದಿರುವ ಜಾಗಕ್ಕೆ ಹಾಕುವುದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ. ಉತ್ತರಾಣಿಯ ರಸವನ್ನು ತೆಗೆದು ಎಣ್ಣೆ ಮಾಡಿ ಕಿವಿನೋವು, ಕಿವುಡುತನ, ಕಿವಿಯಲ್ಲಿ ಸದಾ ಶಬ್ದ ಬರುವುದು ಮುಂತಾದ ಸಮಸ್ಯೆಗಳಿಗೂ ಔಷಧವಾಗಿ ಬಳಸುತ್ತಾರೆ.
ಉತ್ತರಾಣಿ ಬೇರಿನ ಸೂಕ್ಷ್ಮ ಚೂರ್ಣವನ್ನು ಅಕ್ಕಿ ತೊಳೆದ ನೀರಿನಲ್ಲಿ ಸೇವಿಸುವುದರ ಜೊತೆಗೆ, ಉತ್ತರಾಣಿಯ ಬೀಜದ ಪುಡಿಯ ಲೇಪವನ್ನು ಮೂಲವ್ಯಾಧಿಯ ಅಂಕುರಕ್ಕೆ ಹಾಕುವುದರಿಂದ ಮೂಲವ್ಯಾಧಿ ರೋಗವು ಕಡಿಮೆಯಾಗುತ್ತದೆ. ಉತ್ತರಾಣಿಯ ಬೀಜದಿಂದ ಮತ್ತು ಹಾಲಿನಿಂದ ತಯಾರಿಸಿದ ಗಂಜಿಯನ್ನು ಸೇವಿಸುವುದರಿಂದ ಅತಿಯಾದ ಹಸಿವಿನ ಸಮಸ್ಯೆ ನಿವಾರಣೆಯಾಗುತ್ತದೆ. ಉತ್ತರಾಣಿಯ ಬೀಜದ ಲೇಪವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದರಿಂದ ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಉತ್ತರಾಣಿ ಬೀಜದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು







