ಬೆಂಗಳೂರು : ಬೆಂಗಳೂರು ಗಲಭೆ ಸಂಬಂಧ ಸರ್ಕಾರ ರಚಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್.ಡಿ ಬಬಲಾಡಿ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇಂದು ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದೆ.
ವರದಿಯಲ್ಲಿ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆಯು ಪ್ರಮುಖ ಹಿಂದೂ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸಂಘಟಿತ ಮತ್ತು ಪೂರ್ವನಿಯೋಜಿತ ಗಲಭೆ ಎಂಬುದನ್ನು ಸತ್ಯ ಶೋಧನಾ ಸಮಿತಿ ಪತ್ತೆಹಚ್ಚಿದೆ. ಈ ಗಲಭೆ ರಾಜಕೀಯ ಉದ್ದೇಶಕ್ಕಾಗಿ ನಡೆದಿಲ್ಲ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ. ಇದಕ್ಕೆ ಎಸ್ ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ನೇರ ಕಾರಣ ಎಂದು ಸಮಿತಿ ಹೇಳಿದೆ.
ಸಿಎಂಗೆ ವರದಿಯನ್ನು ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸದಸ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ಡಿಜೆಹಳ್ಳಿ-ಕೆಜಿಹಳ್ಳಿ ಘಟನೆಯು ತಕ್ಷಣಕ್ಕಾಗಲಿ ಇಲ್ಲವೇ ಆಕಸ್ಮಿಕವಾಗಿ ನಡೆದಿಲ್ಲ. ಪೂರ್ವಭಾವಿ ಸಿದ್ದತೆ ಹಾಗೂ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗಿದೆ. ಇದು ಕೇವಲ ಕೋಮುಗಲಭೆಯಲ್ಲ. ವ್ಯವಸ್ಥೆಯ ವಿರುದ್ಧ ಆಕ್ರೋಶ ಹಾಕುವ ಪ್ರಯತ್ನ ಇದಾಗಿದ್ದು, ಸ್ಥಳೀಯರು ಮತ್ತು ಒಳಗಡೆ ಇರುವವರೆ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್.ಡಿ ಬಬಲಾಡಿ ನೇತೃತ್ವದ ಸತ್ಯ ಶೋಧನಾ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಸ್ ಎಫ್ ಅಧಿಕಾರಿಗಳಾದ ಡಾ.ಆರ್.ರಾಜು, ಡಾ.ಪ್ರಕಾಶ್, ನಿವೃತ್ತ ಡಿಜಿಪಿ ಎಂ.ಎನ್.ಕೃಷ್ಣಮೂರ್ತಿ, ಪತ್ರಕರ್ತರಾದ ಆರ್.ಕೆ.ಮ್ಯಾಥ್ಯೂ, ಸಂತೋಷ್ ತಮಯ್ಯ, ಪ್ರೊಫೆಸರ್ ಗಳಾದ ಡಾ.ಎಂ.ಜಯಪ್ಪ, ಡಾ.ಎಚ್.ಟಿ.ಅರವಿಂದ, ಸಾಮಾಜಿಕ ಕಾರ್ಯಕರ್ತರಾದ ಮುನಿರಾಜು, ಜರೋಮ್ ಆಯಂಟೋ, ವಕೀಲ ಕ್ಷೇಮನರಗುಂದ್ ಅವರು ಈ ಸಮಿತಿಯಲ್ಲಿದ್ದರು.








