ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ಜಾಲದಲ್ಲಿ ಸಿಲುಕಿ ಅರೆಸ್ಟ್ ಆದ ಕನ್ನಡ ಮೊದಲ ನಟಿ ಎಂಬ ಕುಖ್ಯಾತಿಗೆ ರಾಗಿಣಿ ದ್ವಿವೇದಿ ಪಾತ್ರರಾಗಿದ್ದಾರೆ. ಹೀಗಾಗಿ ಇಷ್ಟು ದಿನ ಕಲಾವಿದರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಶಾಕ್ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಚರ್ಚಿಸಲು ವಾಣಿಜ್ಯ ಮಂಡಳಿಯ ತುರ್ತು ಕಾರ್ಯಕಾರಿ ಸಮಿತಿ ಸಭೆ ಇಂದು ನಡೆಯಲಿದೆ. ಸಭೆಯಲ್ಲಿ ಸ್ಯಾಂಡಲ್‍ವುಡ್ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಹವರ ವಿರುದ್ಧ ಯಾವ ಶಿಸ್ತುಕ್ರಮ ಕೈಗೊಳ್ಳಬೇಕು. ಅವರ ಮೇಲಿನ ಆರೋಪ ನಿರಾಧಾರ ಎಂದು ಕೋರ್ಟ್‍ನಿಂದ ಆದೇಶ ಬರುವವರೆಗೆ ಕನ್ನಡ ಚಿತ್ರರಂಗದ ಚಟುವಟಿಕೆಯಿಂದ ನಿಷೇಧ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಆಕೆಯನ್ನು ಚಿತ್ರರಂಗದ ಚಟುವಟಿಕೆಯಿಂದ ದೂರ ಇಡಲು ತಾತ್ಕಾಲಿಕವಾಗಿ ನಿಷೇಧ ಹೇರುವ ಬಗ್ಗೆಯೂ ಇಂದು ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.








