ಬೆಂಗಳೂರು: ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಹೈಡ್ರಾಮಾ ಮಾಡಿದ್ದಾನೆ.
ವಿರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ಶುಕ್ರವಾರ ದೆಹಲಿಯಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಬೆಂಗಳೂರಿಗೆ ಬರುತ್ತಿದ್ದಂತೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 5 ದಿನ ಸಿಸಿಬಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿ ವಿರೇನ್ ಖನ್ನಾನನ್ನು ಪೊಲೀಸರು ಸಿಸಿಬಿ ಕಚೇರಿಗೆ ಕರೆ ತರುತ್ತಿದ್ದಂತೆ ಮಾಧ್ಯಮಗಳ ಮುಂದೆಯೇ ಕಿರುಚಾಡಿ ಹೈಡ್ರಾಮ ಮಾಡಿದ್ದಾನೆ.
ಮಾಧ್ಯಮಗಳತ್ತ ಕೈ ತೋರಿಸಿ ಕಿರುಚಾಡಿದ ವಿರೇನ್ ಖನ್ನಾ, ಕೋರ್ಟ್‍ನಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ. ಈತನ ಹೈಡ್ರಾಮಕ್ಕೆ ಸೊಪ್ಪು ಹಾಕದ ಸಿಸಿಬಿ ಪೊಲೀಸರು ಆತನನ್ನು ಕಚೇರಿಯೊಳಗೆ ಎಳೆದೊಯ್ದು ಫುಲ್ ಡ್ರಿಲ್ ಮಾಡುತ್ತಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣದಲ್ಲಿ ಎ-3 ಆರೋಪಿಯಾಗಿರುವ ವಿರೇನ್ ಖನ್ನಾ, ದೆಹಲಿ, ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಬರುವ ನಟ-ನಟಿಯರು ಹಾಗೂ ಶ್ರೀಮಂತರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ಇದೇ ಭಾನುವಾರ(ಸೆ.6ರಂದು) ಕೂಡ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದ. ಪಾರ್ಟಿಗೆ ಅತಿಥಿಗಳನ್ನು ಕರೆದಿದ್ದ. ಆದರೆ, ಆತ ದೆಹಲಿಯಲ್ಲಿ ಅರೆಸ್ಟ್ ಆಗುತ್ತಿದ್ದಂತೆ ಪಾರ್ಟಿ ಕ್ಯಾನ್ಸಲ್ ಆಗಿದೆ. ಖನ್ನಾನ ಪಾರ್ಟಿಗೆ ಬರುವುದಾಗಿ ಒಪ್ಪಿಕೊಂಡಿದ್ದವರ ಬೆನ್ನುಬಿದ್ದಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.