ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಶನ್ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಇತ್ತೀಚೆಗೆ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಅಡ್ಮಿಶನ್ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಲಾಗಿತ್ತು.
ಅನ್ಲಾಕ್ 4.0 ಗೈಡ್ಲೈನ್ಸ್ನಲ್ಲಿ ಸೆ.30ರವರೆಗೂ ಶಾಲೆಗಳನ್ನು ಆರಂಭಿಸಲು ಅನುಮತಿ ಕೊಟ್ಟಿಲ್ಲ. ಆದರೂ, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಸೆ.30ರೊಳಗೆ ಎಲ್ಲಾ ಪ್ರವೇಶಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚಿಸಿರುವ ಶಿಕ್ಷಣ ಇಲಾಖೆ, ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯಬಾರದು. ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ.
ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಸಂಬಳ ಕೊಡಲು ಪರದಾಡುತ್ತಿದ್ದ ಖಾಸಗಿ ಶಾಲೆಗಳಿಗೆ ಈ ಆದೇಶ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದರೆ, ಕೊರೊನಾದಿಂದಾಗಿ ಕೆಲಸ ಕಳೆದುಕೊಂಡ, ವ್ಯಾಪಾರ ಇಲ್ಲದೆ ಅಂಗಡಿಗಳನ್ನು ಮುಚ್ಚಿ ಬೀದಿ ಪಾಲಾಗಿರುವ ಪೋಷಕರು ಮಕ್ಕಳನ್ನು ಶಾಲೆಗೆ ಅಡ್ಮಿಷನ್ ಮಾಡಲು ಪರದಾಡುವ ಸ್ಥಿತಿ ಎದುರಾಗಿದೆ.