ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರುಣ ಎರಡನೇ ದಿನವೂ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅವಾಂತರ ಸೃಷ್ಟಿಯಾಗಿದೆ.

ಮಳೆಯ ಹೊಡೆತಕ್ಕೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹೊರಮಾವು, ಹೆಚ್ಬಿಆರ್ ಲೇಔಟ್, ಹೆಣ್ಣೂರಿನಲ್ಲಿ ಮತ್ತೆ ಜಲಾವೃತಗೊಂಡಿವೆ. ತಡರಾತ್ರಿ ನಂತರ ಮಳೆ ನಿಂತಿದ್ದರೂ ಹೊರಮಾವು ಸೇರಿದಂತೆ ಹಲವು ಪ್ರದೇಶಗಳ ತಗ್ಗು ಪ್ರದೇಶಗಳಲ್ಲಿ ಇಂದೂ ಕೂಡ ನೀರು ನಿಂತಿದೆ.

ಮನೆ ಮುಂದೆ ನೀರು ನಿಂತಿದ್ದು, ರಸ್ತೆಗಳೆಲ್ಲಾ ಕೆಸರುಮಯವಾಗಿವೆ. ಮನೆಯಿಂದ ನೀರು ಹೊರಬರಲಾಗದೇ ಜನ ಪರದಾಡುವಂತಾಗಿದೆ.
ಒಡೆದ ರಾಜಕಾಲುವೆ ತಡೆಗೋಡೆ
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಆರ್.ಆರ್ ನಗರದ ಪ್ರಮೋದ್ ಲೇಔಟ್ನ ರಾಜಕಾಲುವೆ ತಡೆಗೋಡೆ ಕುಸಿದಿದೆ. ತಡೆಗೋಡೆ ಕುಸಿದಿದ್ದರಿಂದ ರಾಜಕಾಲುವೆಯಲ್ಲಿ ಹರಿಯುತ್ತಿದ್ದ ನೀರು ಹತ್ತಾರು ಮನೆಗಳಿಗೆ ನುಗ್ಗಿದೆ. ಮನೆಗಳಲ್ಲಿ 5 ಅಡಿಗಳಷ್ಟು ನೀರು ನಿಂತಿದ್ದರಿಂದ ಕಾಳು ಹಾಗೂ ಧವಸ ಧಾನ್ಯಗಳು, ದಾಖಲೆ ಪತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾನಿಯಾಗಿವೆ.

ಪ್ರಮೋದ್ ಲೇಔಟ್ನ ಒಂದೇ ಮನೆಯಲ್ಲಿ 5 ಲಕ್ಷಕ್ಕೂ ಹೆಚ್ಚಿನ ವಸ್ತುಗಳು ಹಾನಿಯಾಗಿವೆ. ನೀರಿನ ಮಟ್ಟ ಕಡಿಮೆಯಾದ ಮೇಲೆ ಮನೆಯೊಳಗೆ ನಿಂತಿದ್ದ ನೀರನ್ನು ಹೊರಹಾಕಿ ಇಡೀರಾತ್ರಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.
ಮಂಗಳವಾರ ರಾತ್ರಿ ಬರೋಬ್ಬರಿ 136 ಮಿ.ಮೀಟರ್ ಮಳೆ ಸುರಿದಿದ್ದರೆ, ಕಳೆದ ರಾತ್ರಿ 109 ಮಿ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








