ಮಂಡ್ಯ : ನಾಡ ದೊರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವ್ಯಾಸಂಗ ಮಾಡಿದ ಶಾಲೆ ಇಂದು ಮುಚ್ಚುವ ಹಂತ ತಲುಪಿದೆ. ಸದ್ಯ ಈ ಶಾಲೆಯಲ್ಲಿ 8 ವಿದ್ಯಾರ್ಥಿಗಳು, ಅವರಿಗೆ 4 ಮಂದಿ ಶಿಕ್ಷಕರಿದ್ದಾರೆ.
ಹೌದು..! ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು 1954-55ರಲ್ಲಿ ಮೂರನೇ ತರಗತಿ ದಾಖಲಾಗಿ ವ್ಯಾಸಂಗ ಮಾಡಿದ್ದಾರೆ. ಅಂದು ಬಿ.ಎಸ್ ಯಡಿಯೂರಪ್ಪ ವ್ಯಾಸಂಗ ಮಾಡಿದ ಈ ಶಾಲೆ ಇಂದು ದುಸ್ಥಿತಿಗೆ ತಲುಪಿದೆ.
ಒಂದು ಕಡೆ ಸರಿಯಾದ ನಿರ್ವಹಣೆ ಇಲ್ಲದೆ ಶಾಲೆ ಶಿಥಿಲವಾಗಿದ್ದರೆ, ಮತ್ತೊಂದು ಕಡೆ ಶಾಲೆಗೆ ಓದಲು ಮಕ್ಕಳಿಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಶಾಲೆಯಲ್ಲಿ ಕೇವಲ 8 ಜನ ಮಕ್ಕಳು, 4 ಜನ ಶಿಕ್ಷಕರಿದ್ದಾರೆ. ಈ ಹಿಂದೆ 800 ರಿಂದ 900 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಇದೀಗ ಬೆರಳೆಣಿಕೆಯಷ್ಟು ಮಕ್ಕಳು ಓದುತ್ತಿದ್ದಾರೆ.
ಅಂದಹಾಗೆ ಸಿಎಂ ಯಡಿಯೂರಪ್ಪ ನವರು ಓದಿದ ಈ ಶಾಲೆ ಶತಮಾನದ ಶಾಲೆಯಾಗಿದೆ. ಆದರೆ ಶತಮಾನದಲ್ಲಿ ಇದ್ದ ಘನತೆ ಮಾತ್ರ ಈಗ ಶಾಲೆಗೆ ಇಲ್ಲ.








