ಬೆಂಗಳೂರು: ಆಡಳಿತ ಪಕ್ಷದ ಶಾಸಕರಿಗೆ ಸದನ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಗದ್ದಲ ಮಾಡಿ ಚರ್ಚೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು. ಸದನದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಕ್ಕುಚ್ಯುತಿಯಿಂದ ಸಲ್ಲಿಕೆಯಾಗಿರುವ ಎರಡು ಸೂಚನೆಗಳ ಚರ್ಚೆಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದಂತೆ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಆಹ್ವಾನಿಸಿದ್ದರು.
ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿಯ ಕೆ.ಜಿ.ಬೋಪಯ್ಯ ಎದ್ದುನಿಂತು ಯಾವುದು ಗಂಭೀರ ವಿಷಯವಿದೆಯೋ ಅದರ ಚರ್ಚೆಗೆ ಮೊದಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು. ಜಗದೀಶ್ ಶೆಟ್ಟರ್ ಅವರು, ಸುಧಾಕರ್ ಅವರ ವಿರುದ್ಧ ರಮೇಶ್ ಕುಮಾರ್ ಬಳಸಿದ ಪದ ಆಕ್ಷೇಪಾರ್ಹವಾಗಿದೆ. ಅದರ ಚರ್ಚೆಗೆ ಅವಕಾಶ ಕೊಡಬೇಕು. ರಮೇಶ್ ಕುಮಾರ್ ಅವರ ವಿರುದ್ಧ ಕ್ರಮಕ್ಕೆ ಸ್ಪೀಕರ್ ಅವರಿಗೆ ಅಧಿಕಾರವಿದೆ. ಅದನ್ನು ಪ್ರಯೋಗ ಮಾಡಬೇಕು ಎಂದು ಒತ್ತಡ ಹೇರಿದರು. ಈ ವೇಳೆ ಶೆಟ್ಟರ್ ಅವರ ವಾದಕ್ಕೆ ಧ್ವನಿಗೂಡಿಸಿದ ಸಚಿವ ಬೈರತಿ ಬಸವರಾಜ, ಸುಧಾಕರ್, ಬಿ.ಸಿ.ಪಾಟೀಲ್ ಮತ್ತಿತರರು ಎದ್ದುನಿಂತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಡ ಹಾಕಿದರು.
ಇದಕ್ಕೆ ಪ್ರತಿಪಕ್ಷದ ಶಾಸಕರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸಚಿವರು, ಶಾಸಕರು ಚರ್ಚೆಗೆ ಅಡ್ಡಿಪಡಿಸುತ್ತಿದ್ದಾರೆ. ಸದನದಲ್ಲಿ ಚರ್ಚೆ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಿದ್ದರಾಮಯ್ಯ ಅವರಿಗೆ ಸ್ಪೀಕರ್ ಮಾತನಾಡಲು ಅವಕಾಶ ಕೊಟ್ಟರೂ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಕ್ಕುಚ್ಯುತಿ ಚರ್ಚೆಯಿಂದ ರಾಜ್ಯದ ಐದೂವರೆ ಕೋಟಿ ಜನರಿಗೆ ಸತ್ಯಾಂಶ ತಿಳಿಯಬೇಕು. ಸ್ಪೀಕರ್ ಅವಕಾಶ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಮಾತನಾಡಲಿ. ನಂತರ ಎಲ್ಲರೂ ಮಾತನಾಡಿ ಸಮಗ್ರ ಚರ್ಚೆ ಮಾಡಿ ಎಂದು ಸಲಹೆ ಮಾಡಿ ವಿವಾದಕ್ಕೆ ತೆರೆ ಎಳೆದರು.








