ಬೆಂಗಳೂರು : ರಾಜ್ಯ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಡಾ. ರಾಮ ಮನೋಹರ ಲೋಹಿಯಾ ಚಿಂತಕರ ವೇದಿಕೆ ಒತ್ತಾಯಿಸಿದೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಡಾ. ರಾಮ ಮನೋಹರ ಲೋಹಿಯಾ ಚಿಂತಕರ ವೇದಿಕೆ, ದೇವರಾಜ ಅರಸು ಅವರು ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರಸು ಜಾರಿಗೊಳಿಸಿದ ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961’ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸಾಕಷ್ಟು ಪರಿಣಾಮ ಬೀರಿದೆ.
ರೈತಾಪಿ ವರ್ಗದಲ್ಲಿ ಭೂ ಹಿಡುವಳಿಯ ಸ್ವರೂಪದ ಬದಲಾವಣೆಗೆ ಈ ಐತಿಹಾಸಿಕ ಕಾಯ್ದೆ ಕಾರಣವಾಗಿದೆ’ ಎಂದು ಪ್ರಧಾನಿಗೆ ಶನಿವಾರ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಅಲ್ಲದೆ ಅರಸು ಅವರು ಜನಪರ ಕಾಯ್ದೆಗಳ ಜಾರಿಗೆ ಸದಾ ತುಡಿಯುತ್ತಿದ್ದರು. ಜೀತ ಪದ್ಧತಿ ನಿಷೇಧ, ಭೂರಹಿತ ಕಾರ್ಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯಗಳ ಆರಂಭ,
ಭಿಕ್ಷುಕರ ಪುನರ್ವಸತಿ, ಋಣಮುಕ್ತ ಯೋಜನೆ, ವಲಸೆ ಕಾರ್ಮಿಕರಿಗಾಗಿ ಆಶ್ರಯ ತಾಣಗಳನ್ನು ನಿರ್ಮಿಸುವ ಯೋಜನೆಗಳನ್ನು ಜಾರಿಗೊಳಿಸಿದ್ದರು.
ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣದ ಪರಿಕಲ್ಪನೆಯು ಅವರ ಕಾಲದಲ್ಲೇ ಜನ್ಮ ತಳೆದಿತ್ತು. ಹೀಗಾಗಿ ‘ಅರಸು ಅವರ ಈ ಎಲ್ಲ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಬೇಕು.
ಇದರಿಂದ ಕರ್ನಾಟಕಕ್ಕೆ ಗೌರವ ಸಿಗುವುದರ ಜತೆಯಲ್ಲೇ, ಹೊಸ ತಲೆಮಾರಿನ ನಾಯಕತ್ವ ಸೃಷ್ಟಿಗೆ ದಾರಿದೀಪವಾಗಲಿದೆ’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.








