ವೈದ್ಯಕೀಯ ವಿದ್ಯಾರ್ಥಿಗಳಿಗೆ ಇನ್ನು ಜಿಲ್ಲಾಸ್ಪತ್ರೆಗಳಲ್ಲಿ ಮೂರು ತಿಂಗಳ ಸೇವೆ ಕಡ್ಡಾಯ
ಹೊಸದಿಲ್ಲಿ, ಸೆಪ್ಟೆಂಬರ್21: 2020-21ರ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ಎಂಡಿ ಅಥವಾ ಎಂಎಸ್ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ನಿಯಮ ರೂಪಿಸಿದೆ.
ವಿದ್ಯಾರ್ಥಿಗಳನ್ನು ತಮ್ಮ ಮೂರನೇ, ನಾಲ್ಕನೇ ಅಥವಾ ಐದನೇ ಸೆಮಿಸ್ಟರ್‌ನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನಿಯೋಜಿಸಲಾಗುವುದು. ಪಿಜಿ ವೈದ್ಯಕೀಯ ಶಿಕ್ಷಣವು ಮೂರು ವರ್ಷಗಳ ಕಾರ್ಯಕ್ರಮವಾಗಿದೆ.
ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ, 1956 ರ ಅಡಿಯಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳು / ಸಂಸ್ಥೆಗಳಲ್ಲಿ, ಎಂಡಿ / ಎಂಎಸ್ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಕೋರ್ಸ್ ಪಠ್ಯಕ್ರಮದ ಭಾಗವಾಗಿ ಜಿಲ್ಲಾ ಆಸ್ಪತ್ರೆಗಳು / ಜಿಲ್ಲಾ ಆರೋಗ್ಯ ವ್ಯವಸ್ಥೆಯಲ್ಲಿ ಮೂರು ತಿಂಗಳ ಕಡ್ಡಾಯ ಸೇವೆಗೆ ಒಳಗಾಗುತ್ತಾರೆ.
ಇದು ಸ್ನಾತಕೋತ್ತರ ಕಾರ್ಯಕ್ರಮದ 3 ಅಥವಾ 4 ಅಥವಾ 5 ನೇ ಸೆಮಿಸ್ಟರ್‌ನಲ್ಲಿ ನಡೆಯುತ್ತದೆ. ಇದನ್ನು ‘ಡಿಸ್ಟ್ರಿಕ್ಟ್ ರೆಸಿಡೆನ್ಸಿ ಪ್ರೋಗ್ರಾಂ’ (ಡಿಆರ್‌ಪಿ) ಎಂದು ಕರೆಯಲಾಗುತ್ತದೆ. ತರಬೇತಿಗೆ ಒಳಪಡುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಜಿಲ್ಲಾ ನಿವಾಸಿ ಎಂದು ಕರೆಯಲಾಗುತ್ತದೆ.
ಅಧಿಕಾರಿಗಳ ಪ್ರಕಾರ, ಇದು ಮೂರು ವಿಷಯಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ತಜ್ಞರು ಇರುತ್ತಾರೆ. ಸ್ನಾತಕೋತ್ತರ ಪದವಿ ಪಡೆದವರು ಜಿಲ್ಲಾ ಆರೋಗ್ಯ ವ್ಯವಸ್ಥೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ ಮತ್ತು ಇದು ಕಾಲಕ್ರಮೇಣ ವೈದ್ಯಕೀಯ ಕಾಲೇಜುಗಳಲ್ಲಿ 10,000-12,000 ಪಿಜಿ ಸೀಟುಗಳನ್ನು ತೆರೆಯಲು ಸಹಾಯ ಮಾಡುತ್ತದೆ.