ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಚ ಬಿಡುವು ಪಡೆದ ಮಳೆರಾಯ – ಇಂದು ಮತ್ತೆ ಭಾರೀ ಮಳೆ ಸಾಧ್ಯತೆ
ಮಂಗಳೂರು, ಸೆಪ್ಟೆಂಬರ್21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಕಳೆದ ರಾತ್ರಿಯಿಂದ ಮಳೆರಾಯ ಕೊಂಚ ಬಿಡುವು ಪಡೆದು ಕೊಂಡಿದ್ದಾನೆ. ಆದರೆ ಇಂದು ಕೂಡ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದೆರಡು ದಿನದಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಜನ ಹೈರಾಣಾಗಿದ್ದರು. ಮಂಗಳೂರಿನ ಬಜ್ಪೆ ಹಾಗೂ ಪಣಂಬೂರಿನಲ್ಲಿ ಅತ್ಯಧಿಕ ಮಳೆಯಾಗಿದೆ.
ನೆರೆ ಪೀಡಿತ ಪ್ರದೇಶಗಳಲ್ಲಿ ನೀರು ಇಳಿಮುಖವಾಗಿದೆ. ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಶಾಂಭವಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮುಲ್ಕಿ ಹೋಬಳಿಯಲ್ಲಿ ನೆರೆ ಆತಂಕ ಮುಂದುವರಿದಿದೆ. ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೋಬಳಿಯ ಮಟ್ಟು ಸಂಪೂರ್ಣ ಜಲಾವೃತವಾಗಿತ್ತು.
ಸೆಪ್ಟೆಂಬರ್ 23ರ ವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇನ್ನು ರೆಡ್ ಅಲರ್ಟ್ ಮುಂದುವರಿದಿದೆ .








