ಬಳ್ಳಾರಿ ಜಿಲ್ಲೆ: ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು, ಕೂಡ್ಲಿಗಿ
ವಿಜಯನಗರ ಜಿಲ್ಲೆ: ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ
ಬೆಂಗಳೂರು: ವಿವಾದಿತ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆ ರಚನೆಗೆ ಇಲ್ಲಿಯವರೆಗೆ ಎದುರಾಗಿದ್ದ ಅಡೆತಡೆಗಳು ದೂರವಾದ ಹಿನ್ನೆಲೆಯಲ್ಲಿ ನೂತನ ಜಿಲ್ಲೆ ರಚನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ.
11 ತಾಲೂಕುಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯನ್ನು 5:6 ತಾಲೂಕುಗಳಾಗಿ ಹಂಚಿಕೆ ಮಾಡಿ ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಮಾಡುವುದು ತುಂಬಾ ಅಗತ್ಯವಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಗೆ ಈ ವಿಷಯನ್ನು ಮಂಡಿಸಲು ಸೂಚಿಸಿ ಬಿಎಸ್‍ವೈ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆ ವಿಭಜನೆಗೆ ಎದುರಾಗಿದ್ದ ಪರ-ವಿರೋಧಿ ಹೋರಾಟಗಳಿಗೆ ತಲೆ ಕೆಡಿಸಿಕೊಳ್ಳದೆ ಸಚಿವ ಆನಂದ್‍ಸಿಂಗ್ ಒತ್ತಡಕ್ಕೆ ಮುಖ್ಯಮಂತ್ರಿಗಳು ಮಣಿದಿದ್ದಾರೆ ಎಂಬುದಕ್ಕೆ ಈ ಟಿಪ್ಪಣಿಯೇ ಉತ್ತರ ನೀಡಿದೆ.
ಬಳ್ಳಾರಿ ಜಿಲ್ಲೆ ವಿಭಜನೆಗೆ ಬಿಜೆಪಿ ಶಾಸಕರೇ ಆದ ಸೋಮಶೇಖರ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯವುದೇ ಕಾರಣಕ್ಕೂ ಜಿಲ್ಲೆ ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಬಿಎಸ್‍ವೈ ಮುಂದೆಯೂ ತಮ್ಮ ಆಕ್ರೋಶ ಹೊರಹಾಕಿದ್ದರು.
ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಮೂಲೆ ಗುಂಪಾಗಿತ್ತು. ಆದರೆ, ಕೊರೊನಾ ನಡುವೆಯೇ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆಗೆ ಪ್ರಕ್ರಿಯೆಗೆ ಮರುಜೀವ ಬಂದಿದೆ.
ಬಳ್ಳಾರಿ ಜಿಲ್ಲೆಯು ತುಂಬಾ ವಿಸ್ತಾರವಾಗಿದೆ. ಬಳ್ಳಾರಿ 11 ಕಂದಾಯ ತಾಲೂಕುಗಳನ್ನು ಹಾಗೂ 3 ಕಂದಾಯ ಉಪವಿಭಾಗಗಳನ್ನು ಒಳಗೊಂಡಿರುವ ಅತಿದೊಡ್ಡ ಜಿಲ್ಲೆ ಎನಿಸಿಕೊಂಡಿದೆ. ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ ದೂರದಲ್ಲಿವೆ. ಇದರಿಂದ ಈ ಭಾಗದ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನ ಸಾಮಾನ್ಯರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ತುಂಬಾ ದುಸ್ತರವಾಗಿದೆ.
ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಪ್ರಸ್ತುತ ಬಳ್ಳಾರಿ ಜಿಲ್ಲೆಯ 11 ತಾಲೂಕುಗಳಲ್ಲಿ ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು(ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು, ಕೂಡ್ಲಿಗಿ) ಉಳಿಸಿಕೊಂಡು, ಉಳಿದ 6 ತಾಲೂಕುಗಳನ್ನು (ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ) ಸೇರಿಸಿ ಹೊಸಪೇಟೆ ಪಟ್ಟಣವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ನೂತನ ವಿಜಯನಗರ ಜಿಲ್ಲೆ ರಚಿಸುವುದು ತುಂಬಾ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಹೀಗಾಗಿ ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಕುರಿತ ವಿಚಾರ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಹೊಸ ಜಿಲ್ಲೆ ರಚನೆಗೆ ಹೋರಾಟ ಸಾಧ್ಯತೆ..!
ನೂತನ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರ ಕ್ಯಾಬಿನೆಟ್‍ನಲ್ಲಿ ಅನುಮೋದನೆ ನೀಡಿದರೆ ಈಗಾಗಲೇ ಹಲವು ದಶಕಗಳಿಂದ ಬೇಡಿಕೆಯಲ್ಲಿರುವ ಇತರೆ ಜಿಲ್ಲೆಗಳ ರಚನೆಯ ಬೇಡಿಕೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ವಿಶೇಷವಾಗಿ ಬೆಳಗಾವಿ ಜಿಲ್ಲೆಯನ್ನು ವಿಭಾಗಿಸಿ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕೆಂಬ ಹೋರಾಟ ಕಳೆದ ವರ್ಷದ ತೀವ್ರ ಸ್ವರೂಪ ಪಡೆದಿತ್ತು. ಚಿಕ್ಕೋಡಿ ಜೊತೆಗೆ ಶಿರಸಿ, ಶಿಕಾರಿಪುರ ಸೇರಿದಂತೆ ಹಲವು ಜಿಲ್ಲೆಗಳ ಬೇಡಿಕೆಗಳು ಕೇಳಿ ಬಂದಿದ್ದವು. ಈ ಜಿಲ್ಲೆಗಳ ಬೇಡಿಕೆಗಳಿಗೆ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.