ಬೆಂಗಳೂರು: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಹಾಗೂ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲಿ ಕರ್ನಾಟಕ ಬಂದ್ ಮಾಡುವುದಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇಂದು ಸಂಜೆ ದೇಶದ 207 ರೈತ ಸಂಘಟನೆಗಳ ಸಭೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬಂದ್‍ಗೆ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಶುಕ್ರವಾರ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಇದೀಗ ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ಈ ಕುರಿತಂತೆ ಚರ್ಚಿಸಿ ಸರ್ಕಾರ ಬಿಲ್ ವಾಪಸ್ ಪಡೆಯದಿದ್ದರೆ ಬಂದ್ ದಿನಾಂಕವನ್ನು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದುವರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿವರ ನೀಡಿದರು.
ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ಬಂದ್‍ಗೆ ಕರೆ ಕೊಟ್ಟಿದೆ. ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆ ವಿರುದ್ಧ ಚಳವಳಿ ತೀವ್ರ ಸ್ವರೂಪ ಪಡೆದಿದೆ. ನಮ್ಮ ಸರ್ಕಾರ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆದರೆ ಬಂದ್ ಇರಲ್ಲ, ಇಲ್ಲವಾದ್ರೆ ಬಂದ್ ಅನಿವಾರ್ಯ. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮನಸ್ಸು ಬದಲಿಸಬಹುದು. ಹೀಗಾಗಿ ಕಾದು ನೋಡಲು ರೈತ ಸಂಘಟನೆಗಳು ನಿರ್ಧರಿಸಿವೆ.







