“ನಮ್ಮ ಕೆಲಸ ಮಾಡಿಕೊಡಿ ಇಲ್ಲಾ ನಮ್ಮ ರಾಜೀನಾಮೆ ತಗೋಳಿ” ಇದು ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆ ಕೇಳಿಬಂದ ಮಾತು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಿನ್ನೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗಿರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಎಲ್ಲಾ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಮುಗಿಬಿದ್ದರು. ಈ ವೇಳೆ ಮೊದಲಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ‘ಕ್ಷೇತ್ರದ ಕೆಲಸಗಳೇ ಆಗುತ್ತಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ನಾವು ಕೆಲಸ ಆಗಬೇಕು ಎಂದರೆ ಏಜೆಂಟ್ ಗಳನ್ನು ಕರೆದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಳಲು ತೋಡಿಕೊಂಡರು. ಹೀಗೆ ಒಟ್ಟು ಎಪ್ಪತ್ತು ಶಾಸಕರು ಸಭೆಯಲ್ಲಿ ಮಾತನಾಡಿದ್ದರು. ಈ ಪೈಕಿ ಉತ್ತರ ಕರ್ನಾಟಕ ಭಾಗದ ಶಾಸಕರಾದ ರಾಜುಗೌಡ, ಬಸವನಗೌಡ ಪಾಟೀಲ್ ಯತ್ನಾಳ್, ಗೂಳಿಹಟ್ಟಿ ಶೇಖರ್ ಪ್ರಮುಖರಾಗಿದ್ದರು. ಅದರಲ್ಲೂ ‘ನಮ್ಮ ಕೆಲಸ ಮಾಡಿಕೊಡ್ತಿರಾ ಅಥವಾ ನಾನು ರಾಜೀನಾಮೆ ಕೊಟ್ಟು ಹೋಗಲೇ” ಎಂದು ಗೂಳಿಹಟ್ಟಿ ಶೇಖರ್ ಸಿಎಂಗೆ ಧಮ್ಕಿ ಹಾಕಿದರು. ಇದಕ್ಕೆ ಉತ್ತರ ಕರ್ನಾಟಕ ಕೆಲ ಶಾಸಕರೂ ಸಹ ಧ್ವನಿಗೂಡಿಸುತ್ತಿದ್ದಂತೆ ಸಿಎಂ ಕೊಂಚ ಗಲಿಬಿಲಿಯಾದರು. ನಂತರ ಸುಧಾರಿಸಿಕೊಂಡು, ‘ಪ್ರತಿ ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆದು ಆಗಾಗ ಸಭೆ ಮಾಡುತ್ತೇನೆ’ ಎಂದು ಹೇಳಿ ಆ ಶಾಸಕರನ್ನು ಸಮಾಧಾನ ಮಾಡಿದರು.
ಒಟ್ಟಾರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೇ ಬಹಿರಂಗವಾಗುತ್ತಲೇ ಇದೆ. ನಿನ್ನೆ ಸಭೆಯಲ್ಲಿ ಶಾಸಕರು ರಾಜೀನಾಮೆ ಬಗ್ಗೆ ಮಾತನಾಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿದ್ದೆಗೆಡಿಸಿರುವುದಂತೂ ನಿಜ.








