ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದೆಹಲಿಯಲ್ಲಿ ಐಪಿಎಲ್ ಸೇರಿದಂತೆ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಸಿಸೋಡಿಯಾ, “ಐಪಿಎಲ್ ನಂತಹ ಅಪಾರ ಜನ ಸಮೂಹ ಸೇರುವ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲು ನಾವು ನಿರ್ಧರಿಸಿದ್ದೇವೆ. ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರವು ಮುಖ್ಯವಾಗುತ್ತದೆ” ಎಂದಿದ್ದಾರೆ.
ಇದಕ್ಕೂ ಮುನ್ನ ದೆಹಲಿ ಸರ್ಕಾರ ಮಾರ್ಚ್ 31ರವರೆಗೆ ಎಲ್ಲ ಸಿನಿಮಾ ಥಿಯೇಟರ್ಗಳನ್ನು ಮುಚ್ಚುವಂತೆ ಆದೇಶಿಸಿತ್ತು. ವೈರಸ್ ಹರಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಎಲ್ಲ ಸಿನಿಮಾ ಥಿಯೇಟರ್ಗಳು, ಶಾಲೆ, ಕಾಲೇಜುಗಳನ್ನು ಮಾರ್ಚ್ 31ರವರೆಗೆ ಮುಚ್ಚಬೇಕು. ಆದರೆ ಪರೀಕ್ಷೆಗಳು ಮಾತ್ರ ನಿಗದಿಯಂತೆ ನಡೆಯುತ್ತವೆ. ಹೆಚ್ಚು ಜನರು ಒಂದೆಡೆ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ತಿಳಿಸಿದ್ದರು.
ಮಾರ್ಚ್ 29 ರಂದು ಆರಂಭವಾಗಬೇಕಿರುವ ಐಪಿಎಲ್ ವೇಳಾಪಟ್ಟಿಯಲ್ಲಿ ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದ ಆತಿಥ್ಯದಲ್ಲಿ ಏಳು ಪಂದ್ಯಗಳು ನಿಗದಿಯಾಗಿವೆ.








