ಬೆಂಗಳೂರು: ಪ್ರತಿಪಕ್ಷಗಳು ಹಾಗೂ ರೈತರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಮಸೂದೆಯನ್ನು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮಂಡಿಸಿದ್ದಾರೆ.
ರೈತರ ವಿರೋಧಕ್ಕೆ ಕಾರಣವಾಗಿರುವ 3 ತಿದ್ದುಪಡಿ ಮಸೂದೆಗಳ ಪೈಕಿ ಎಪಿಎಂಸಿ ಮಸೂದೆಯನ್ನು ಎಸ್.ಟಿ ಸೋಮಶೇಖರ್ ಮಂಡಿಸಿದರು. ಮಸೂದೆಗೆ ಪ್ರತಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಸೋಮವಾರ ಕರ್ನಾಟಕ ಬಂದ್ ಫಿಕ್ಸ್..!
ಕಳೆದ ಸೋಮವಾರದಿಂದ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸರ್ಕಾರದ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ವಿವಾದಿತ ಎಂಪಿಎಂಸಿ ಮಸೂದೆಯನ್ನ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮಂಡಿಸುತ್ತಿದ್ದಂತೆ ಇತ್ತ ರೈತರು ಸರ್ಕಾರ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ರೈತ ವಿರೊಧಿ ಮಸೂದೆ ತರುವುದಿಲ್ಲ ಎಂಬ ಭಾವನೆ ಇತ್ತು. ಆದರೆ, ಯಡಿಯೂರಪ್ಪ ಅವರದ್ದು ಮೊಸಳೆ ಕಣ್ಣೀರು ಎಂಬುದು ಸಾಬೀತಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ. ಶುಕ್ರವಾರ ರಾಜ್ಯಾದ್ಯಂತ ರಸ್ತೆ ತಡೆ, ಹೆದ್ದಾರಿ ತಡೆ ಮೂಲಕ ಜೈಲ್ ಭರೋ ಚಳವಳಿ ಮಾಡುತ್ತೇವೆ. ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.








