ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ನೂತನ ಶಾಸಕ ಶರತ್ ಬಚ್ಚೇಗೌಡ ಅವರು ತಮ್ಮ ತಾಯಿಯ ಮುಗುಳುನಗೆ ನೆನೆದು ಭಾವುಕರಾದರು. ಸದನದಲ್ಲಿ ಸಂವಿಧಾನ ಕುರಿತು ಮಾತನಾಡುತ್ತಾ ಮಹಿಳಾ ದಿನಾಚರಣೆ ಕಡೆಗೆ ವಾಲಿದ ಅವರು, ಮೊನ್ನೆ ಮನೆಯಲ್ಲಿ ತಾಯಿ ಊಟ ಬಡಿಸುವಾಗ ಮುಗುಳುನಗೆ ಬೀರುತ್ತಿದ್ದರು. ನಾನು ಏಕೆ ಈ ನಗು ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು, 40 ವರ್ಷದ ಹಿಂದೆ ಮಾವನವರು ವಿಧಾನಸಭೆಯಿಂದ ಮನೆಗೆ ಬಂದಾಗ, ಅದೆ ರೀತಿ 25 ವರ್ಷದ ಹಿಂದೆ ನಿನ್ನ ತಂದೆ, ಪತಿ ಬಚ್ಚೇಗೌಡರು ವಿಧಾನಸಭೆಯಿಂದ ಮನೆಗೆ ಬಂದಾಗ ಮುದ್ದೆ ಊಟ ಉಪ್ಪುಸಾರು ಬಡಿಸಿದ್ದೆ. ಈಗ ನೀನು ಕೂಡ ವಿಧಾನಸಭೆಯಿಂದ ಬಂದಿದ್ದೀಯ, ನಿನಗೂ ಉಪ್ಪುಸಾರು ಮುದ್ದೆ ಊಟ ಬಡಿಸುತ್ತಿದ್ದೇನೆ ಎಂದು ಹಳೆಯದನ್ನು ಮೆಲುಕು ಹಾಕಿದಾಗ ಮುಗುಳುನಗೆ ಬಂತು ಎಂದು ತಾಯಿ ಹೇಳಿದ್ದರಂತೆ. ಇದನ್ನು ವಿಧಾಸಭೆಯಲ್ಲಿ ನೆನಪು ಮಾಡಿಕೊಂಡು ಕೆಲ ಕ್ಷಣ ಶರತ್ ಬಚ್ಚೇಗೌಡ ಬಾವುಕರಾದರು.
ಇನ್ನು ಶರತ್ ಬಚ್ಚೇಗೌಡ ವಿಷಯ ಮಂಡನೆಗೆ ಇಡೀ ಸದನವೇ ತಲೆದೂಗಿತು. ಇದು ಅವರ ರಾಜಕೀಯ ಪ್ರೌಡಿಮೆಗೆ ಹಿಡಿದ ಕನ್ನಡಿಯಾಗಿತ್ತು. ಅಲ್ಲದೆ ಅವರು ಭಾಷಣ ಮುಗಿಸುತ್ತಿದ್ದಂತೆ ಸ್ಪೀಕರ್ ಅವರು ಚೆನ್ನಾಗಿ ಮಾತನಾಡಿದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.









