ನವದೆಹಲಿ: ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಬಿಹಾರ ಸಜ್ಜಾಗಿದೆ. ಕೊರೊನಾ ಹೆಮ್ಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಅದರ ನಡುವೆಯೇ ಬಿಹಾರ ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಮಧ್ಯಾಹ್ನ 12.30ಕ್ಕೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ನವದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆ ಸದಸ್ಯರ ಅವಧಿ ಅಕ್ಟೋಬರ್ 29ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟ ಮಾಡಲಿದೆ.
ವಿಶೇಷ ಎಂದರೆ ದೇಶಾದ್ಯಂತ ಕೊರೊನಾ ಗೈಡ್‍ಲೈನ್ ಜಾರಿಯಲ್ಲಿರುವ ಕಾರಣ ಮತದಾನ, ಚುನಾವಣಾ ಪ್ರಚಾರ, ಸಭೆ-ಸಮಾರಂಭಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಯಾವ ಯಾವ ಕಟ್ಟುನಿಟ್ಟಿನ ಕ್ರಮಗಳನ್ನು ವಿಧಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮನೆ-ಮನೆ ಪ್ರಚಾರಕ್ಕೆ ಕೆಲ ಕಠಿಣ ಷರತ್ತು ಹಾಕುವ ಸಾಧ್ಯತೆ ಇದೆ. ಕೇವಲ ಮೂವರು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು, ರೋಡ್ ಶೋಗಳಲ್ಲಿ ಕೇವಲ 5 ಕಾರುಗಳನ್ನು ಮಾತ್ರ ಬಳಸಲು ಅವಕಾಶ ನೀಡಬಹುದು ಹಾಗೂ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳ ಜತೆ ಇಬ್ಬರು ಮಾತ್ರ ಇರಬೇಕು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಆದರೆ, ಲಕ್ಷಾಂತರ ಜನರನ್ನು ಸೇರಿಸುವ ಚುನಾವಣಾ ಪ್ರಚಾರ ಸಭೆಗಳ ಬಗ್ಗೆ ಆಯೋಗ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಶಿರಾ ಬೈ ಎಲೆಕ್ಷನ್‍ಗೂ ಮುಹೂರ್ತ ಫಿಕ್ಸ್
ಬಿಹಾರ ವಿಧಾನಸಭೆಗೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ದಿನಾಂಕ ಇಂದು ಬಹಿರಂಗವಾಗುವ ಸಾಧ್ಯತೆ ಇದೆ.
ಜೆಡಿಎಸ್‍ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸತ್ಯನಾರಾಯಣ ಕೊರೊನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರಕ್ಕೂ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಿರಾ ಉಪಚುನಾವಾಣೆಗೆ ಗ್ರೌಂಡ್ ವರ್ಕ್ ಶುರು ಮಾಡಿವೆ. ಟಿ.ಬಿ ಜಯಚಂದ್ರಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಪಕ್ಕಾ ಆಗಿದ್ದರೆ, ಜೆಡಿಎಸ್ ಸತ್ಯ ನಾರಾಯಣ ಅವರ ಮಗನಿಗೆ ಟಿಕೆಟ್ ನೀಡುವುದು ಪಕ್ಕಾ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೂ ಪ್ರಕಟಿಸಿಲ್ಲ, ಅದರೂ, ಸಿಎಂ ಪುರ ಬಿ.ವೈ ವಿಜಯೇಂದ್ರ ಈಗಾಗಲೇ ಶಿರಾ ಕ್ಷೇತ್ರದಲ್ಲಿ ಒಂದು ಹಂತದ ಪ್ರಚಾರ ಸಭೆ ನಡೆಸಿದ್ದಾರೆ.
ಹೀಗಾಗಿ ಶಿರಾ ಕ್ಷೇತ್ರ ಮೂರು ಪಕ್ಷಗಳ ನಡುವೆ ತ್ರಿಕೋನ ಪೈಪೋಟಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.








