ಚೆನ್ನೈ : ಸಂಗೀತ ಸರದಾರ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಹೀಗಾಗಿ ಆಸ್ಪತ್ರೆಯತ್ತ ಇಂದು ಸಿನಿ ಗಣ್ಯರು, ಅಭಿಮಾನಿಗಳು ಧಾವಿಸಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯ ಮುಂದೆ ಎಸ್ ಪಿಬಿ ಅಭಿಮಾನಿಗಳ ಜಮಾಯಿಸಿದ್ದು, ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಗಾಗಿ ಕಾಯುತ್ತ ಎಸ್ ಪಿಬಿ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ನಿನ್ನೆ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ನಟ ಕಮಲ್ ಹಾಸನ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇದೀಗ ತಮಿಳು ಚಿತ್ರರಂಗದ ಗಣ್ಯರು ಕೂಡ ಒಬ್ಬೊಬ್ಬರಾಗಿ ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ.
ಗುರುವಾರ ಎಂಜಿಎಂ ಆಸ್ಪತ್ರೆ ಎಸ್ ಪಿಬಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆಗಸ್ಟ್ 5ರಂದು ಎಸ್ ಪಿಬಿ ದಾಖಲಾಗಿದ್ದರು.
ಎಕ್ಮೋ ಮತ್ತು ಇನ್ನಿತರ ಲೈಫ್ ಸಪೋರ್ಟ್ ಮೇಲೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 24 ಗಂಟೆಯಿಂದ ಎಸ್ ಪಿಬಿ ಆರೋಗ್ಯ ಕ್ಷೀಣಿಸುತ್ತಿದ್ದು, ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ.
ಎಂಜಿಎಂ ಆಸ್ಪತ್ರೆಯ ನುರಿತ ವೈದ್ಯರ ತಂಡ ಎಸ್ ಪಿಬಿ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಹೇಳಿದೆ.
ಆಗಸ್ಟ್ 5ರಂದು ಎಸ್ ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.
ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್ ಬಿಪಿಗೆ ಚಿಕಿತ್ಸೆ ನೀಡಿವೆ.
ಆಗಸ್ಟ್ 24ರಂದು ಎಸ್ ಪಿಬಿ ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.








