ಬೆಂಗಳೂರು : ಫೈನಾನ್ಶಿಯರ್ ನವೀನ್ ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು ಕೇಳಿ ಬಂದಿದೆ. ಸದ್ಯ ಅವರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್, ರಾಜು ಬಂಧಿತರಾಗಿದ್ದಾರೆ.
ಏನಿದು ಘಟನೆ..?
ಫೈನಾನ್ಶಿಯರ್ ನವೀನ್ ಹಾಗೂ ಆರೋಪಿಗಳ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ವಿಚಾರವಾಗಿ ಆರೋಪಿಗಳು ಗುರುವಾರ ಆತನನ್ನು ಕಿಡ್ನಾಪ್ ಮಾಡಿ ನಾಗಮಂಗಲದ ವಸತಿ ಗೃಹವೊಂದರಲ್ಲಿ ಬಂಧಿಸಿದ್ದರು ಎನ್ನಲಾಗಿದೆ.
ಆದರೆ ಅವರಿಂದ ತಪ್ಪಿಸಿಕೊಂಡಿರುವ ನವೀನ್ ಪೋಷಕರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದ. ಮಗನ ಅಪಹರಣದ ಮಾಹಿತಿ ಪಡೆದ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತಿಲಕ್ ನಗರ ಪೊಲೀಸರು ನಾಗಮಂಗಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಸತಿ ಗೃಹದ ಮೇಲೆ ದಾಳಿ ಮಾಡಿ 7 ಮಂದಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಸುನಾಮಿ ಕಿಟ್ಟಿ ಹೆಸರು ಹೇಳಿದ್ದಾರಂತೆ. ಅಪಹರಣ ನಡೆಸಿ ಸಂದರ್ಭದಲ್ಲಿ ಕಿಟ್ಟಿ ಕೂಡ ಕಾರಿನಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.








