ಬೆಂಗಳೂರು : ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ರಾಜ್ಯ ಸರ್ಕಾರ ಸಾರ್ವಜನಿಕ ಸಮಾವೇಶ-ಸಮಾರಂಭಗಳ ಮೇಲೆ ನಿರ್ಬಂಧ ಹೇರಿದೆ. ಆದರೆ ಬೆಂಗಳೂರು ನಗರದಲ್ಲಿ ಆರ್ ಎಸ್‌ಎಸ್ ಮಹಾಸಮಾವೇಶ ಇದೇ 15 ರಿಂದ ಅನಿರ್ಬಂಧಿತವಾಗಿ ನಡೆಯಲಿದ್ದು, ಆರ್ ಎಸ್‌ಎಸ್ ಗೆ ಸರ್ಕಾರಿ ಆದೇಶ ಅನ್ವಯಿಸುವುದಿಲ್ಲವೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

“ಇದೇ 15 ರಿಂದ ನಗರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಸಮಾವೇಶದಲ್ಲಿ ದೇಶದ ಬೇರೆ ಕಡೆಗಳಿಂದ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕನಿಷ್ಠ ಈ ಪ್ರತಿನಿಧಿಗಳ ಆರೋಗ್ಯದ ಕಾಳಜಿ ದೃಷ್ಟಿಯಿಂದಾದರೂ ಮಹಾಸಮಾವೇಶವನ್ನು ಮುಂದೂಡಿ. ಸಿಎಂ ಯಡಿಯೂರಪ್ಪ ಅವರೇ ಯಾವ ಸಿದ್ಧಾಂತವೂ ಮನುಷ್ಯನ ಪ್ರಾಣಕ್ಕಿಂತ ಹೆಚ್ಚಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇನ್ನು ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ವೈರಸ್ ನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಒಂದು ವಾರ ಕಾಲ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಜನ್ಮ ದಿನಾಚರಣೆ, ಬೇಸಿಗೆ ಶಿಬಿರ, ಸಮಾವೇಶ,ಪ್ರದರ್ಶನ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.








