ವಿಜಯಪುರ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದೂ ಕೂಡ ವರುಣನ ಅಬ್ಬರ ಮುಂದುವರೆದಿದೆ. ಮಳೆಯ ಅಬ್ಬರದಿಂದ ಮನೆಯ ಮೇಲ್ಛಾವಣಿ ಕುಸಿದು ಬಾಲಕಿ ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.


ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದಲ್ಲಿ 11 ವರ್ಷದ ಬಾಲಕಿ ಮರೆವ್ವ ಬಿಜ್ಜೂರ್ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಮತ್ತೋರ್ವ ಬಾಲಕಿಯ ತಲೆ ಹಾಗೂ ಕಾಲಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮುದ್ದೇಬಿಹಾಳ ತಹಶೀಲ್ದಾರ್ ಜಿ.ಎಸ್ ಮಳಗಿ ಹಾಗೂ ಕಂದಾಯ ನಿರೀಕ್ಷಕ ಎಸ್.ಬಿ ಮಾವಿನಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನಗಳಿಂದ ಮುದ್ದೇಬಿಹಾಳ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ತಾಲೂಕಿನ ಚವನಬಾವಿಯಲ್ಲಿ 12 ಮನೆಗಳು ಕುಸಿದಿವೆ. ಜತೆಗೆ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.








