ಬೆಂಗಳೂರು : ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದಾರೆ.
ಇದಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೆಜೆಸ್ಟಿಕ್ ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.
ಮೆಜೆಸ್ಟಿಕ್ ಮುಂಭಾಗ ಪೇಟ ತೊಟ್ಟು ಕತ್ತೆಯ ಮೇಲೆ ಮೆರವಣಿಗೆ ಬರುವ ಮೂಲಕ ವಾಟಾಳ್ ನಾಗರಾಜ್ ಅವರು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ಅಲ್ಲದೇ ವಾಟಾಳ್ ಮಂಗಳವಾದ್ಯಗಳ ದೊಡ್ಡ ತಂಡದೊಂದಿಗೆ ಆಗಮಿಸಿದ್ದರು. ಇವರ ಜೊತೆಗೆ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದರು.
ಮಂಗಳವಾದ್ಯಗಳ ಮಧ್ಯೆ ಕತ್ತೆಯ ಮೇಲೆ ಕುಳಿತುಕೊಂಡು ವಾಟಾಳ್ ನಾಗರಾಜ್ ಇಡೀ ಮೆಜೆಸ್ಟಿಕ್ ರೌಂಡ್ಸ್ ಹಾಕಿದರು.
ಇದನ್ನೂ ಓದಿ : ಬಸ್ ಸಂಚಾರ ನಿಲ್ಲಿಸುವಂತೆ ಅಧಿಕಾರಿಯ ಕಾಲಿಗೆ ಬಿದ್ದ ರೈತ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ಅಪರೂಪದ ಚಳುವಳಿ. ವಿಶ್ವದಲ್ಲೇ ಇಂತಹ ಚಳುವಳಿ ನಡೆದಿಲ್ಲ.
ಕತ್ತೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರದ ನೀತಿಯನ್ನ ವಿರೋಧಿಸುತ್ತಿದ್ದೇವೆ.
ಇಂತಹ ಪ್ರತಿಭಟನೆ ನೂರು ವರ್ಷಗಳಾದರೂ ಬರುವುದಿಲ್ಲ. ನಾವೆಲ್ಲರೂ ಪ್ರಾಮಾಣಿಕ ಕನ್ನಡ ಒಕ್ಕೂಟದ ಮುಖಂಡರು ಬಹಳ ನಿರಂತರವಾಗಿ ಹೋರಾಟ ಮಾಡಿದ್ದೇವೆ.
ರೈತರಿಗಾಗಿ ನಾವು 50 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಇನ್ಮುಂದೆ ಮುಂದೇಯೂ ನಮ್ಮ ಉಸಿರು ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.








