ಬಂದ್ ಮಾಡುವಂತೆ ರೈತ ಮುಖಂಡನ ಒತ್ತಾಯ- ಮೋದಿ ಪರ ಪಾಠ ಮಾಡಿ ಬಾಯಿ ಮುಚ್ಚಿಸಿದ ವೃದ್ಧ ವ್ಯಾಪಾರಿ
ದಾವಣಗೆರೆ, ಸೆಪ್ಟೆಂಬರ್28: ಸೋಮವಾರ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸೊಪ್ಪು ಮಾರಾಟ ತಡೆಯಲು ಬಂದ ರೈತ ಮುಖಂಡನಿಗೆ ವೃದ್ಧ ವ್ಯಾಪಾರಿಯೊಬ್ಬರು ಮೋದಿ ಪರವಾಗಿ ಪಾಠ ಮಾಡಿ ಬಾಯಿ ಮುಚ್ಚಿಸಿದ ಘಟನೆ ದಾವಣಗೆರೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ಸೋಮವಾರ ಸೊಪ್ಪಿನ ವ್ಯಾಪಾರಿ ಗುಡ್ಡಪ್ಪ ಚಿನ್ನಕಟ್ಟೆ ದಾವಣಗೆರೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದರು.
ಕೃಷಿ ಮಸೂದೆಗಳನ್ನು ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ಬಂದ್ ಹಿನ್ನೆಲೆಯಲ್ಲಿ ಕೆಲ ರೈತ ಮುಖಂಡರು ಎಪಿಎಂಸಿ ಮಾರುಕಟ್ಟೆ ಪ್ರವೇಶಿಸಿ ಸೊಪ್ಪು ಮಾರಾಟ ಮಾಡದಂತೆ ಗುಡ್ಡಪ್ಪ ಚಿನ್ನಕಟ್ಟೆ ಅವರನ್ನು ಒತ್ತಾಯಿಸಿದರು. ಆಗ ವೃದ್ಧ ವ್ಯಾಪಾರಿ ಬಂದ್ ಮಾಡಲು ನಿರಾಕರಿಸಿ ನಾವು ವ್ಯಾಪಾರ ಏಕೆ ಬಂದ್ ಮಾಡಬೇಕು ಎಂದು ರೈತ ಮುಖಂಡರ ಜೊತೆಗೆ ವಾಗ್ವಾದಕ್ಕಿಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡ ನಿಮ್ಮ ಮೋದಿ ಮಾಡಿರುವ ಕಾನೂನಿನಿಂದ ರೈತನೂ ಇರುವುದಿಲ್ಲ.. ಕೊತ್ತಂಬರಿ ಬೆಳೆಯಲು ಜಮೀನು ಕೂಡ ಇರುವುದಿಲ್ಲ. ರೈತರ ಜಮೀನು ಕಸಿದುಕೊಳ್ಳುವ ಕಾನೂನು ಮಾಡಿದ್ದಾರೆ ಎಂದು ವೃದ್ಧ ವ್ಯಾಪಾರಿ ಜೊತೆಗೆ ಜಟಾಪಟಿಗೆ ಇಳಿದರು. ಅದಕ್ಕೆ ವೃದ್ಧ ವ್ಯಾಪಾರಿ, ಮೋದಿ ನಮಗೆ ಒಳ್ಳೆಯದನ್ನೇ ಮಾಡಿದ್ದಾರೆ. ಮೋದಿ ಇರುವುದರಿಂದಲೇ ನಾವಿದ್ದೇವೆ. ನಿಮ್ಮ ಮುಖಂಡರಿಂದ ರೈತರಿಗೆ ಏನು ಅನುಕೂಲವಾಗಿದೆ ಎಂದು ಪ್ರಶ್ನೆ ಮಾಡಿದರು.

ವೃದ್ಧ ವ್ಯಾಪಾರಿಯ ಪ್ರಶ್ನೆಗೆ ಉತ್ತರಿಸಲಾಗದ ರೈತ ಮುಖಂಡ ಬಂದ್ ಸಂದರ್ಭದಲ್ಲಿ ವ್ಯಾಪಾರ ಮಾಡಿ ಏನಾದರೂ ತೊಂದರೆಗೆ ಒಳಗಾದರೆ ನಾವು ಜವಾಬ್ದಾರರಲ್ಲ ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತರು.








