ಸ್ವ ಹಿತಾಸಕ್ತಿ ಆರೋಪಕ್ಕೆ ಸಿಡಿಮಿಡಿಗೊಂಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ನನಗೆ 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವ ಇದೆ. ನನಗೆ ಆಟಗಾರರ ಜೊತೆ ಮಾತನಾಡುವ ಹಕ್ಕಿದೆ. ಯಾವುದೇ ಆಟಗಾರರಿಗೆ ಸಲಹೆ ನೀಡುವ ಅಧಿಕಾರವಿದೆ. ಅದು ಶ್ರೇಯಸ್ ಅಯ್ಯರ್ ಆಗಿರಲಿ, ವಿರಾಟ್ ಕೊಹ್ಲಿ ಆಗಿರಲಿ. ಆಟಗಾರರು ಸಲಹೆ ಕೇಳಿದ್ರೆ ಮಾರ್ಗದರ್ಶನ ನೀಡುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ತಮ್ಮ ಮೇಲೆ ಬಂದಿರುವ ಸ್ವಹಿತಾಸಕ್ತಿ ಆರೋಪಕ್ಕೆ ಖಾರವಾಗಿಯೇ ದಾದಾ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಶ್ರೇಯಸ್ ಅಯ್ಯರ್ ಗೆ ನಾನು ಕಳೆದ ವರ್ಷ ಸಹಾಯ ಮಾಡಿದ್ದೆ. ಮಾರ್ಗದರ್ಶನ ನೀಡಿದ್ದೆ. ಇದೀಗ ನಾನು ಬಿಸಿಸಿಐ ಅಧ್ಯಕ್ಷನಾಗಿದ್ದೇನೆ. ಹಾಗಂತ ಮರೆಯಬೇಡಿ. ನಾನು 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ನಾನು ಯುವ ಆಟಗಾರರ ಜೊತೆ ಮಾತನಾಡಿ ಅವರಿಗೆ ಮಾರ್ಗದರ್ಶನ ನೀಡುತ್ತೇನೆ. ಅದು ಯಾರೇ ಆಗಿರಲಿ ಎಂದು ಗಂಗೂಲಿ ಹೇಳಿದ್ದಾರೆ.
ಗಂಗೂಲಿ ವಿರುದ್ಧ ಇತ್ತೀಚೆಗೆ ಸ್ವಹಿತಾಸಕ್ತಿ ಆರೋಪ ಕೇಳಿ ಬಂದಿತ್ತು. ದೆಹಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಪಂದ್ಯ ಗೆದ್ದ ನಂತರ ನಾಯಕ ಶ್ರೇಯಸ್ ಅಯ್ಯರ್ ಅವರು ನನಗೆ ದಾದಾ ಸಹಾಯ ಮಾಡಿದ್ದರು ಎಂದು ಹೇಳಿದ್ದರು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದರು.
ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿತ್ತು. ಶ್ರೇಯಸ್ ಅಯ್ಯರ್ ನನ್ನ ಕ್ರಿಕೆಟ್ ಜರ್ನಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ರಿಕಿ ಪಾಂಟಿಂಗ್ ಮತ್ತು ದಾದಾ ಸಾಕಷ್ಟು ಪ್ರೇರಣೆ ನೀಡಿದ್ದರು ಎಂದು ಹೇಳಿದ್ದರು.








