ಬೆಂಗಳೂರು: ಕೇಂದ್ರ ಗೃಹ ಇಲಾಖೆ ಅನ್‍ಲಾಕ್ 5.0 ಗೈಡ್‍ಲೈನ್ಸ್ ಪ್ರಕಟಿಸಿದೆ. ಶಾಲಾ-ಕಾಲೇಜು, ಸಿನಿಮಾ ಮಾಲ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್ ತೆರೆಯುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಷರತ್ತಿನ ಗ್ರೀನ್‍ಸಿಗ್ನಲ್ ನೀಡಿದೆ.
ಇದರೊಂದಿಗೆ ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ವೇಳೆ ವಿಧಿಸಲಾಗಿದ್ದ ಬಹುತೇಕ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದಂತಾಗಿದ್ದು, ಕೆಲ ಷರತ್ತುಗಳನ್ನು ವಿಧಿಸಲಾಗಿದೆ.
ಅಕ್ಟೋಬರ್ 15ರ ಬಳಿಕ ಶಾಲಾ-ಕಾಲೇಜು, ಕೋಚಿಂಗ್ ಕೇಂದ್ರಗಳ ಆರಂಭಕ್ಕೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ.
ಆದರೆ, ಶಾಲಾ-ಕಾಲೇಜುಗಳನ್ನು ಆರಂಭಿಸುವ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ.
ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ರಾಜ್ಯ ಸರ್ಕಾರಗಳು ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬಹುದು. ಪರಿಸ್ಥಿತಿ ಅವಲೋಕನ ಆಧಾರದ ಮೇಲೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಶಾಲಾ-ಕಾಲೇಜು ಆರಂಭಕ್ಕೆ ಷರತ್ತುಗಳು..!
* ಆನ್‍ಲೈನ್ ತರಗತಿಗಳನ್ನು ಶಾಲಾ-ಕಾಲೇಜುಗಳು ಮುಂದುವರೆಸಲು ಇಚ್ಚಿಸಿದರೆ ಅನುಮತಿ ನೀಡಬಹುದು
* ಒಂದು ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿಗೆ ಬರಲು ಬಯಸಿದರೆ ಅವರ ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು.
* ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಇದ್ದರೆ ಕಡ್ಡಾಯ ಹಾಜರಾತಿ ನಿಯಮ ಹೇರುವಂತಿಲ್ಲ. ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಕುರಿತು ಪೋಷಕರ ತೀರ್ಮಾನವೇ ಅಂತಿಮ.
* ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಪರಿಸ್ಥಿತಿ ಅವಲೋಕಿಸಿ ಸಮಯ ನಿಗದಿ ಮಾಡಬಹುದು.
* ಪಿಹೆಚ್‍ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅ.15ರಿಂದ ಲ್ಯಾಬೋರೇಟರಿ ತೆರೆಯಲು ಅನುಮತಿ ನೀಡಲಾಗಿದೆ.
ಸಿನಿಮಾ ಮಂದಿರ/ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ಓಪನ್..!
ಕಳೆದ 6 ತಿಂಗಳಿಂದ ಮುಚ್ಚಿರುವ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ಹಾಗೂ ಮನೋರಂಜನಾ ಪಾರ್ಕ್‍ಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನ್‍ಲಾಕ್ 5.0 ಗೈಡ್‍ಲೈನ್ಸ್‍ನಲ್ಲಿ ಷರತ್ತಿನ ಅನುಮತಿ ನೀಡಿದೆ.

ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇ.50ರಷ್ಟು ಆಸನಗಳ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಲಾಗಿದೆ. ಕಂಟೈನ್‍ಮೆಂಟ್ ಪ್ರದೇಶ ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಸಿನಿಮಾ ಮಂದಿರಗಳ ಅನ್‍ಲಾಕ್‍ಗೆ ಒಪ್ಪಿಗೆ ಕೊಡಲಾಗಿದೆ.
ಕೇವಲ ಕ್ರೀಡಾಪಟುಗಳಿಗೆ ಮಾತ್ರ ಸ್ವಿಮ್ಮಿಂಗ್ ಪೂಲ್‍ಗಳನ್ನು ತೆರೆಯಬಹುದಾಗಿದೆ. ಪಾರ್ಕ್ ಸೇರಿದಂತೆ ಮನರಂಜನಾ ಕೇಂದ್ರಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.









