ದುಬೈ : 2020 ಐಪಿಎಲ್ ನ 14 ನೇ ಪಂದ್ಯದಲ್ಲಿ ಸತತ ಎರಡು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ ಎರಡು ಸೋಲುಗಳ ನಂತ್ರ ಗೆಲುವಿನ ಟ್ರ್ಯಾಕ್ ಗೆ ಮರಳಿರುವ ಸನ್ ರೈಸರ್ಸ್ ಹೈದರಾಬಾದ್ ಸೆಣಸಲಿದೆ.
ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಗೆಲುವಿನ ರುಚಿ ನೋಡದ ಸಿಎಸ್ ಕೆ, ಇಂದಿನ ಪಂದ್ಯದಲ್ಲಿ ವಾರ್ನರ್ ಹುಡುಗರನ್ನು ಮಣಿಸಿ ಗೆಲುವಿನ ಟ್ರ್ಯಾಕ್ ಗೆ ಮರಳಲು ತಯಾರಿ ನಡೆಸಿದೆ.
ಇತ್ತ ಎರಡು ಸೋಲುಗಳ ಬಳಿಕ ಗೆಲುವಿನ ರುಚಿ ನೋಡಿರುವ ಹೈದರಾಬಾದ್ ಅದನ್ನೇ ಮುಂದುವರಿಸುವ ಪ್ಲಾನ್ ಮಾಡಿಕೊಂಡಿದೆ.
ಎರಡೂ ತಂಡಗಳು ಎಲ್ಲಾ ವಿಭಾಗಗಳಲ್ಲೂ ಸುಧಾರಿಸಬೇಕಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಉಭಯ ತಂಡಗಳಿಂದಲೂ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ ಸಿಎಸ್ ಕೆ ತಂಡ ಕಳೆದ 2 ಪಂದ್ಯಗಳಿಂದ ನೀರಸ ಪ್ರದರ್ಶನ ತೋರುತ್ತಿದೆ.
ಮುರಳಿ ವಿಜಯ್ ಮತ್ತು ವ್ಯಾಟ್ಸನ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿಜಯ್ ಜಾಗಕ್ಕೆ ಋತುರಾಜ್ ಗಾಯಕ್ವಾಡ್ ಓಪನ್ ಮಾಡುವ ಸಾಧ್ಯತೆಗಳಿವೆ.
ಇನ್ನು ಒನ್ ಡೌನ್ ಗೆ ಅಂಬಾಟಿ ರಾಯುಡು ಬಂದ್ರೆ ಟು ಡೌನ್ ಡು ಪ್ಲೆಸಿಸ್ ತ್ರಿ ಡೌನ್ ನಾಯಕ ಧೋನಿ ಬಂದ್ರೆ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಲಿದೆ.
ಇದನ್ನೂ ಓದಿ : ಮುಂಬೈ ಬ್ಯಾಟ್ಸ್ ಮನ್ ಗಳ ರೌದ್ರಾವತಾರ.. ಪಂಜಾಬ್ ಗೆ 48 ರನ್ ಗಳ ಸೋಲು
ಧೋನಿ ಬಳಿಕ ರವೀಂದ್ರ ಜಡೇಜಾ, ನಂತ್ರ ಬ್ರಾವೋ ಬ್ಯಾಟ್ ಬೀಸಬಹುದು. ಉಳಿದಂತೆ ಬೌಲಿಂಗ್ ನಲ್ಲಿ ಸಿಎಸ್ ಕೆ ಆಟಗಾರರು ಸುಧಾರಿಸಬೇಕಿದೆ.
ಜಡೇಜಾ, ಪೀಯೂಷ್ ಚಾವ್ಲಾ , ದೀಪಕ್ ಚಹಾರ್ ದುಬಾರಿಯಾಗುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಇಮ್ರಾನ್ ತಾಹಿರ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಸನ್ ರೈಸರ್ಸ್ ಹೈದರಾಬಾದ್
ಹೈದರಾಬಾದ್ ತಂಡದಲ್ಲೂ ಕೂಡ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿದೆ. ಜಾನಿ ಬೈರ್ ಸ್ಟೋವ್, ವಾರ್ನರ್, ಕೇನ್ ವಿಲಿಯಮ್ಸನ್ ಹೊರತುಪಡಿಸಿ ಉಳಿದ ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ.
ಮನೀಷ್ ಪಾಂಡೆ ಕೂಡ ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ರಶೀದ್ ಖಾನ್ ಬಿಟ್ಟು ಉಳಿದ ಹೈದರಾಬಾದ್ ಬೌಲರ್ ಗಳು ದುಬಾರಿಯಾಗುತ್ತಿದ್ದು, ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಚೆನ್ನೈ ದರ್ಬಾರು
ಐಪಿಎಲ್ ನಲ್ಲಿ ಇದುವರೆಗೂ ಈ ಉಭಯ ತಂಡಗಳು 13 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 10 ಪಂದ್ಯಗಳಲ್ಲಿ ಗೆಲುವು ಕಂಡು ಮೇಲುಗೈ ಸಾಧಿಸಿದ್ರೆ, ಸನ್ ರೈಸರ್ಸ್? ತಂಡ ಕೇವಲ 3 ಪಂದ್ಯಗಳಲ್ಲಿ ಜಯ ಕಂಡಿದೆ.









